ಗುರುವಾರ, ಮಾರ್ಚ್ 8, 2012

ಚಂದ್ರನ ಪರಿಭ್ರಮಣ

ಅಮಾವಾಸ್ಯೆ ಎಂದರೇನು?
 
      ಅಮಾವಾಸ್ಯೆಗೆ ಹೆದರುವ ಜನರೇ ಹೆಚ್ಚು. ಹೆದರಿಕೆಗೆ ಬಹುಶಃ ಕತ್ತಲು ಪ್ರಮುಖ ಕಾರಣವಾಗಿರಬೇಕು. ಯಾಕೆಂದರೆ ಚಂದ್ರನಿಲ್ಲದ ರಾತ್ರಿ ಗಾಢ ಕತ್ತಲು ಆವರಿಸಿರುತ್ತದೆ. ವಿದ್ಯುತ್ ಶಕ್ತಿಯ ಆವಿಷ್ಕಾರವಾಗಿರದ ಆ ದಿನಗಳಲ್ಲಿ ಚಂದ್ರನ ಬೆಳಕು ಮಾತ್ರ ರಾತ್ರಿಯ ದೀವಿಗೆಯಾಗಿರುತ್ತಿತ್ತು. ಹೀಗೆ ಚಂದ್ರನಿಲ್ಲದ ರಾತ್ರಿ ಎಂದರೆ ಅದು ಭಯಕ್ಕೆ ಕಾರಣವಾಗುತ್ತಿತ್ತು. ಆದ್ದರಿಂದಲೇ ಮಾಟ-ಮಂತ್ರಗಳು ಅಮಾವಾಸ್ಯೆಯಂದು ಹೆಚ್ಚಾಗಿ ಮಾಡಲ್ಪಡುತ್ತಿದ್ದವು.  ಜನರಿಗೆ ಅಮಾವಾಸ್ಯೆಯೆಂದರೆ ಏನೋ ವಿಶೇಷವೆಂಬ ಅವ್ಯಕ್ತ ಭಯ ಪ್ರಾರಂಭವಾಗಿರಬಹುದಾಗಿದೆ. 


      ಹಾಗಾದರೆ ಅಮಾವಾಸ್ಯೆಗೆ ಹೆದರಬೇಕೆ? ಖಂಡಿತ ಇಲ್ಲ. ಎಲ್ಲ ದಿನಗಳಂತೆ ಅದು ಕೂಡ ಒಂದು ಖೌಗೋಳಿಕ ವಿದ್ಯಮಾನ ಅಷ್ಟೇ  ಅಮಾವಾಸ್ಯೆ ಎಂಬ ಹೆಸರು ಹೇಗೆ ಬಂತು ಎನ್ನಲು ಒಂದು ಕುತೂಹಲಕರ ಮಾಹಿತಿ ಇದೆ. 
      ಪ್ರತಿ ತಿಂಗಳಲ್ಲಿ ಹದಿನೈದು ದಿನಗಳ  ಎರಡು ಪಕ್ಷಗಳು ಇರುತ್ತವೆ. ದಿನದಿನವೂ ಚಂದ್ರನು ವೃದ್ಧಿಸುತ್ತ ಹುಣ್ಣಿಮೆಯಂದು ಪೂರ್ಣ ಪ್ರಮಾಣದಲ್ಲಿ ಕಾಣುವುದು ಶುಕ್ಲಪಕ್ಷ. ಎರಡನೆಯದು ಕೃಷ್ಣಪಕ್ಷ. ಈ ಎರಡನೆಯ ಹದಿನೈದು ದಿನಗಳಲ್ಲಿ ಚಂದ್ರನು ಕ್ಷೀಣವಾಗುತ್ತ ಹೋಗುತ್ತಾನೆ.   
      ಹೀಗೆ ಕ್ಷೀಣವಾಗುತ್ತ ಹೋಗುವ ಚಂದ್ರನು ಆ ತಿಂಗಳ ಕೊನೆಯ ದಿನ ಪೂರ್ತಿ ಕಾಣದಂತಾಗುತ್ತಾನೆ. ಪುರಾಣಗಳಲ್ಲಿ ಇದನ್ನು ಬಹಳ ವಿಸ್ಮಯವಾಗಿ ವರ್ಣಿಸಿದ್ದಾರೆ. ತನ್ನ ಎಲ್ಲ ತೇಜಸ್ಸನ್ನು ಕಳೆದುಕೊಂಡ ಚಂದ್ರನಲ್ಲಿ ಕೇವಲ ಎರಡೇ ಎರಡು ಕಲೆಗಳು ಉಳಿಯುತ್ತವೆ. ಆಗ ಅವನು ಸೂರ್ಯನಲ್ಲಿ ಮೊರೆಹೋಗಿ ಅಮಾ ಎಂಬ ಸೂರ್ಯ ಕಿರಣಗಳಲ್ಲಿ ಬಚ್ಚಿಟ್ಟುಕೊಳ್ಳುತ್ತಾನೆ. ಸೂರ್ಯನಿಂದ ಪಡೆದುಕೊಂಡ ಶಕ್ತಿಕಿರಣಗಳಿಂದ ಪ್ರಭಾವಶಾಲಿಯಾದ ಚಂದ್ರನು ಮತ್ತೆ ಬಾಲಚಂದ್ರನಾಗಿ, ಪೂರ್ಣಚಂದ್ರನಾಗಿ ಬೆಳಗಿ ಕೃಷ್ಣಪಕ್ಷದಲ್ಲಿ ಮತ್ತೆ ತೇಜೋಹೀನ ನಾಗತೊಡಗುತ್ತಾನೆ.
      ಹೀಗೆ ಚಂದ್ರನು 'ಅಮಾ' ಎನ್ನುವ ಸೂರ್ಯ ಕಿರಣಗಳಲ್ಲಿ 'ವಾಸ'ವಾಗಿರುವ ದಿನವೇ ಅಮಾವಾಸ್ಯೆ. ಅಂದು ರಾತ್ರಿ ಸಂಪೂರ್ಣ ಕತ್ತಲೆ ಆವರಿಸಿರುತ್ತದೆ ಎಂಬುದನ್ನು ಬಿಟ್ಟರೆ ಹೆದರಲು ಬೇರೇನೂ ಕಾರಣ ಇಲ್ಲ. 


       

    

ಸೋಮವಾರ, ಫೆಬ್ರವರಿ 13, 2012

ಶಿವರಾತ್ರಿಯಂದು ಜಾಗರಣೆ ಏಕೆ?

ನಂಜನುಂಡ ದೇವ ಮಹಾದೇವ 


   ಶಿವರಾತ್ರಿಯಂದು ಮಾಡುವ ಉಪವಾಸ ಹಾಗೂ ಜಾಗರಣೆಗಳು ಶಿವನಿಗೆ ಬಹಳ ಪ್ರಿಯವಾದುದೆಂಬ ಭಾವನೆಯಿದೆ. ಅದ್ದರಿಂದ ಇಡೀ ದೇಶವು ಶಿವರಾತ್ರಿಯನ್ನು ಬಹಳ ಶ್ರದ್ಧೆಯಿಂದ ಆಚರಿಸುತ್ತದೆ. ಗುಡಿಗಳಲ್ಲಿ ಬೆಳಗಿನವರೆಗೂ ಭಜನೆಗಳನ್ನು ಏರ್ಪಡಿಸುತ್ತಾರೆ. ಧ್ವನಿವರ್ಧಕಗಳಲ್ಲಿ ರಾತ್ರಿಯಿಡೀ ಜೋರಾಗಿ ಹಾಡು ಹಾಡುತ್ತಾರೆ. ಇಡೀ ರಾತ್ರಿ ಶಿವಲಿಂಗಗಳಿಗೆ ಅಭಿಷೇಕ ಗಳಾಗುತ್ತಲೇ ಇರುತ್ತವೆ. ರಾತ್ರಿಯೆಲ್ಲ ಟಿ.ವಿ.ಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾರೆ. ಉದ್ದೇಶವೆಂದರೆ ಶಿವರಾತ್ರಿಯಂದು ನಿದ್ದೆ ಮಾಡದೆ ಎಲ್ಲರೂ ಎಚ್ಚರವಾಗಿರಲಿ ಎಂದು. ಏಕೆ? ಪ್ರಸಂಗವನ್ನು ವಿಮರ್ಶಿಸೋಣ.

   ಶಿವ ನೃತ್ಯಪ್ರಿಯ. ಅವನ ತಾಂಡವಕ್ಕೆ ಇಡೀ ಜಗತ್ತು ತಲ್ಲಣಗೊಳ್ಳುತ್ತದೆ. ಅವನು ಸ್ಮಶಾನವಾಸಿ. ಮೈಮೇಲೆಲ್ಲ ಭಸ್ಮ ಬಳಿದುಕೊಂಡಿರುತ್ತಾನೆ. ಕೊರಳಲ್ಲೊಂದು ಹಾವು. ಕೈಯಲ್ಲಿ ಡಮರುಗ. ತಲೆಯಮೇಲೆ ಚಂದ್ರನ ಚೂರು, ಅದು ಅವನ ಆಭರಣ. ಜಟೆಯಿಂದ ಒಂದೆ ಸವನೆ ಭೂಮಿಗೆ ಚೆಲ್ಲುತ್ತಿರುವ ಗಂಗೆ, ಅವನ ಎರಡನೆಯ ಹೆಂಡತಿ,  ತಲೆಯೇರಿ ಕುಳಿತಿದ್ದಾಳೆ. ಅವನು ಉಟ್ಟುಕೊಂಡಿರುವುದು  ಆನೆಯ ಚರ್ಮ. ಹಣೆಯ ಮಧ್ಯದಲ್ಲೊಂದು ಬೆಂಕಿಯಂತಹ ಕಣ್ಣು. ತೊಡೆಯ ಮೇಲೊಬ್ಬಳು ಹೆಂಡತಿ, ಅವಳು ಗೌರಿ.

  ಹೀಗೆ ಪರಶಿವನ ಸಂಸಾರ, ರೂಪ, ಅಲಂಕಾರಗಳೆಲ್ಲ ಬಹಳ ವೈಚಿತ್ರ್ಯಗಳಿಂದ ಕೂಡಿವೆ. ಅವನ ಮೂರನೆಯ ಕಣ್ಣು ಬಹಳ ವಿಲಕ್ಷಣವಾಗಿದ್ದು ವಿಶೇಷವಾಗಿದೆ. ಆದ್ದರಿಂದಲೇ ಅವನು ವಿರೂಪಾಕ್ಷನೆಂದು ಕರೆಸಿಕೊಳ್ಳುತ್ತಾನೆ. ಶಿವನು ಭಕ್ತಪ್ರಿಯ. ಅವನು ತನ್ನ ಭಕ್ತರಿಗೆ ಬಹು ಬೇಗನೆ  ಒಲಿಯುತ್ತಾನೆ. ಆದ್ದರಿಂದ ಶಿವ ಎಲ್ಲ ವರ್ಗದ ಜನರಿಗೆ ಆರಾಧ್ಯ ದೈವವಾಗಿದ್ದಾನೆ.

   ಸಮುದ್ರಮಥನವು ಅಮೃತವನ್ನು ಪಡೆಯುವುದಕ್ಕಾಗಿ ನಡೆದ ಮಹಾಪ್ರಸಂಗ. ದೇವ ದಾನವರು ಒಟ್ಟಾಗಿ ಸಮುದ್ರವನ್ನು ಕಡೆದಾಗ ಮೊಟ್ಟಮೊದಲು ಬಂದದ್ದೇ ಹಾಲಾಹಲ. ಅದು ಕಾಳಕೂಟ ವಿಷ. ಅದರ ಒಂದು ಹನಿ ಭೂಮಿಗೆ ತಾಗಿದರೂ ಸರ್ವನಾಶ ತಪ್ಪುತ್ತಿರಲಿಲ್ಲ. ಅದನ್ನು ಎಲ್ಲಿಯೂ ಚೆಲ್ಲುವಂತಿಲ್ಲ. ಕೇವಲ ಅದರ ಜ್ವಾಲೆಗಳಿಂದಲೇ ಸಕಲ ಜೀವಿಗಳೂ ನಾಶವಾಗುವಷ್ಟು ಹಾನಿಕಾರಕವಾಗಿತ್ತು ಆ ವಿಷ. ಗಳಿಗೆ ಗಳಿಗೆಗೂ ಹಾಲಾಹಲದ ಜ್ವಾಲೆಗಳು ವ್ಯಾಪಿಸಿ ಅದರಿಂದ ದುಷ್ಟ ಪ್ರಭೆಯು ಏಳಲು ಪ್ರಾರಂಭಿಸಿದವು. ದೇವತೆಗಳು ಆತಂಕಕ್ಕೆ ಒಳಗಾಗತೊದಗಿದರು. ಆದರೆ ದೈತ್ಯರು ಸ್ವಾರ್ಥಿಗಳು. ಅವರು ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸದಲ್ಲಿಯೇ ಮಗ್ನರಾಗಿದ್ದರು. ದೇವತೆಗಳು ಸಕಲರಿಗೂ ಲೇಸನ್ನೇ ಬಯಸುವವರು. ಹಾಲಾಹಲದಿಂದ ಉಂಟಾಗಬಹುದಾದ ಹಾನಿಯನ್ನು ಪರಿಹರಿಸಲು ಪರಶಿವನೇ ಸಮರ್ಥನು ಎಂದುಕೊಂಡು ಅವನಿಗೆ  ಮೊರೆ ಹೋದರು.

   ತನ್ನನ್ನು ನಂಬಿಕೊಂಡು ಬಂದ ದೇವತೆಗಳನ್ನು ಶಿವನು ನಿರಾಸೆಗೊಳಿಸಲಿಲ್ಲ. ಅವರಿಗೆ ಅಭಯವನ್ನು ನೀಡಿ ಘೋರವಾದ ಕಾಳಕೂಟ ವಿಷವನ್ನು ತಾನು ಭರಿಸುವುದಾಗಿ ಹೇಳಿ ಅವರನ್ನು ಕಳುಹಿಸಿದ. ಜಗತ್ತನ್ನು ಸಂರಕ್ಷಿಸುವ ಸಲುವಾಗಿ ವಿಷದ ಎಲ್ಲ ನಂಜನ್ನು ತಾನೇ ಕುಡಿದುಬಿಡಲು ಶಿವನು ನಿರ್ಧರಿಸಿದ್ದ. ಹೀಗೆ ಜಗತ್ತನ್ನು ಆವರಿಸಲಿದ್ದ ವಿಷವನ್ನೆಲ್ಲ ಕುಡಿದ ಶಿವನಿಗೆ ವಿಷದ ನಂಜು ಅವನ ದೇಹಕ್ಕೆ ಹಾನಿ ಮಾಡಬಾರದೆಂದು ವಿಷವು ಗಂಟಲಿನಿಂದ ಕೆಳಗಿಳಿಯದಂತೆ ನಿಗ್ರಹಿಸಿಬಿಟ್ಟಳು. ಗಂಟಲಲ್ಲೇ ಉಳಿದ ವಿಷದ ಪ್ರಭಾವದಿಂದ ಶಿವನ ಕುತ್ತಿಗೆಯು ನೀಲಿ ಬಣ್ಣದಿಂದ ಆವೃತವಾಯಿತು. ಶಿವಭಕ್ತರೆಲ್ಲ ಏನು ಮಾಡುವುದೆಂದು ದಿಕ್ಕು ತೋಚದಾಯಿತು.

   ಭಕ್ತರ ಭಾವನೆಯೇ ಹಾಗೆ. ಪರಮಾತ್ಮನನ್ನೂ ಅವರು ತಮ್ಮಂತೆಯೇ ಭಾವಿಸುತ್ತಾರೆ. ವಿಷವು ತಮಗೆ ತೊಂದರೆ ನೀಡುವಂತೆ ದೇವರಿಗೂ ಹಾನಿ ಮಾಡಬಹುದೇನೋ ಎಂಬ ಅಳುಕು ಭಕ್ತರದು. ಪರಶಿವನ ಕುತ್ತಿಗೆ ನೀಲಿಯಾದ ತಕ್ಷಣ ಭಕ್ತರು ವಿವಂಚನೆಗೊಳಗಾಗತೊಡಗಿದರು. ಹಳ್ಳಿಗಳಲ್ಲಿ ಹಾವು ಕಚ್ಚಿ ವಿಷವೆರಿದಾಗ ಮಾಡುವುದೇನು? ಸುತ್ತಲೂ ಕುಳಿತು ಭಜನೆ ಮಾಡುತ್ತಾ ಹಾವು ಕಚ್ಚಿಸಿಕೊಂಡವನು  ನಿದ್ಫ್ರೆ ಮಾಡದಂತೆ ಜಾಗರಣೆ ಮಾಡುವುದು, ಜಾಗರಣೆ ಮಾಡಿಸುವುದು. ಹೀಗೆ ಶಿವನಿಗೆ ವಿಷದಿಂದ ಹಾನಿಯಾಗದಂತೆ ಕಾಪಾಡಲು ಜಾಗರಣೆ ಮಾಡುವ ಸಂಪ್ರದಾಯ ಬೆಳೆದು ಬಂತು. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಯಾರಾದರೂ ಊಟ ಮಾಡುವುದುಂಟೆ? ಹಾಗೆಯೇ ಬೆಳೆದು ಬಂದದ್ದು ಶಿವರಾತ್ರಿ ಉಪವಾಸ ಹಾಗೂ ಜಾಗರಣೆ. 








ಶುಕ್ರವಾರ, ಫೆಬ್ರವರಿ 3, 2012

ನೀಲಮಾಧವ ಭಾಗ-೨

ವಿಚಿತ್ರ ರೂಪದ ಜಗನ್ನಾಥ 
(ಮುಂದುವರೆದಿದ್ದು)

ನೀಲಮಾಧವನ ಮೂರ್ತಿಯು ಒಮ್ಮಿಂದೊಮ್ಮೆಲೆ ಅದೃಶ್ಯವಾಗಿದ್ದು ಗೊತ್ತಾಗಿ ಇಂದ್ರದ್ಯುಮ್ನ ಬಹಳ ಪಶ್ಚಾತ್ತಾಪ ಪಡುತ್ತಾನೆ. ತನ್ನಾನ್ನು ತಾನು ನಿಂದಿಸಿಕೊಳ್ಳುತ್ತಾನೆ. ಪಶ್ಚಾತ್ತಾಪದಿಂದ ವಿಪರೀತ ಕುಂದಿಹೋದ ನಂತರ ಪರಮಾತ್ಮ ಅವನ ಕನಸಿನಲ್ಲಿ ಕಾಣಿಸಿಕೊಂಡು ಹತ್ತಿರದ ಸಮುದ್ರಕ್ಕೆ ಹೋದರೆ ತಾನು ದೊರಕುತ್ತೇನೆಂದು ಭರವಸೆ ಕೊಡುತ್ತಾನೆ. ಮರುದಿನ ಸಮುದ್ರಕ್ಕೆ ಹೋಗಿ ಇಂದ್ರದ್ಯುಮ್ನನು ನೀಲಮಾಧವನಿಗಾಗಿ ಕಾಯತೊಡಗುತ್ತಾನೆ  ಸಾಯಂಕಾಲದ ಸಮಯದಲ್ಲಿ ವಿಷ್ಣು ಲಾಂಛನಗಳಾದ ಶಂಖ ಚಕ್ರಗಳಿಂದ ಕೂಡಿದ ಮರದ ದಿಮ್ಮೆಗಳು ಸಮುದ್ರದಲ್ಲಿ ತೇಲುತ್ತಾ ಬರುತ್ತವೆ. ಇಂದ್ರದ್ಯುಮ್ನನು ಆ ಮರದ ದಿಮ್ಮೆಗಳನ್ನು ತನ್ನ ಅರಮನೆಗೆ ತರುತ್ತಾನೆ.

ತಾನು ನೀಲಮಾಧವನಿಗಾಗಿ ಕಟ್ಟಿಸಿದ ದೇವಸ್ಥಾನದಲ್ಲಿ ಪ್ರತಿಷ್ಥಾಪಿಸುವ ಸಲುವಾಗಿ  ಸಮುದ್ರದಲ್ಲಿ ದೊರಕಿದ ಮರದ ದಿವ್ಯವಾದ ದಿಮ್ಮೆಗಳಿಂದ ಮೂರ್ತಿಗಳನ್ನು ಮಾಡಿಸಬೇಕೆಂದು ಆಲೋಚಿಸಿ ತನ್ನ ಬಡಗಿಗಳನ್ನು ಕರೆಸಿ ಅವರಿಗೆ ಜವಾಬ್ದಾರಿಯನ್ನು ಒಪ್ಪಿಸಿದನು. ಆದರೆ ತಿಂಗಳುಗಳಾದರೂ ಅವನ ಬದಗಿಗಳಿಂದ ಮರದ ದಿಮ್ಮೆಗಳ ಒಂದು ಚೂರನ್ನೂ ಕತ್ತರಿಸಲಾಗಲಿಲ್ಲ. ರಾಜ ಹತಾಶೆಯಿಂದ ದಿಕ್ಕು ತೋಚದಂತಾಗುತ್ತಾನೆ. ಮರದ ದಿಮ್ಮೆಗಳಿಂದ ಮೂರ್ತಿಗಳನ್ನು ತಯಾರಿಸಿಕೊಟ್ಟವರಿಗೆ ತನ್ನ ಅರ್ಧ ರಾಜ್ಯವನ್ನೇ ಕೊಡುತ್ತೇನೆಂದು ಡಂಗುರ ಹೊಡೆಸುತ್ತಾನೆ. ರಾಜ್ಯದ ಆಸೆಯಿಂದ ಅನೇಕರು ಬಂದು ಪ್ರಯತ್ನಿಸುತ್ತಾರೆ. ಆದರೆ ಯಾರಿಂದಲೂ ಕಟ್ಟಿಗೆಯನ್ನು ಒಂದು ಚೂರನ್ನು ಕತ್ತರಿಸಲೂ ಸಾಧ್ಯವಾಗುವುದಿಲ್ಲ.

ಬಲರಾಮ-ಸುಭದ್ರೆ-ಜಗನ್ನಾಥ  
ಒಂದು ದಿನ ಹಣ್ಣು ಹಣ್ಣು ಮುದುಕನೊಬ್ಬ ಬಂದು ತಾನು ನೀಲಮಾಧವನ ಮೂರ್ತಿಯನ್ನು ಅದೇ ಕಟ್ಟಿಗೆಯಿಂದ ಮಾಡಿಕೊದುತ್ತೆನೆಂದು ಹೇಳುತ್ತಾನೆ. ರಾಜನಿಗೆ ನಂಬಿಕೆ ಬರುವುದಿಲ್ಲವಾದರೂ ಬೇರೆ ದಾರಿ ಕಾಣದೆ ಒಪ್ಪಿಕೊಳ್ಳುತ್ತಾನೆ. ಕೋಣೆಯೊಂದರಲ್ಲಿ ಒಳಚಿಳಕವನ್ನು ಹಾಕಿಕೊಂಡು ಮುದುಕ ಕೆಲಸವನ್ನು ಪ್ರಾರಂಭಿಸುತ್ತಾನೆ. ಅನೇಕ ದಿನಗಳವರೆಗೆ ಕೋಣೆಯಿಂದ  ಕಟ್ಟಿಗೆ ಕತ್ತರಿಸುವ ಹಾಗೂ ಸುತ್ತಿಗೆಯ ಶಬ್ದಗಳು ನಿರಂತರವಾಗಿ ಕೇಳುತ್ತಲೇ ಇರುತ್ತವೆ. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಎಲ್ಲ ಶಬ್ದಗಳೂ ನಿಂತುಬಿಡುತ್ತವೆ. ಗಾಬರಿಯಿಂದ ರಾಜನು ಕೋಣೆಯ ಬಾಗಿಲನ್ನು ತೆರೆಸಲು ಮುದುಕ ಸ್ಥಪತಿ ಅಲ್ಲಿರುವುದೇ ಇಲ್ಲ. ನಂತರ ರಾಜನಿಗೆ ಗೊತ್ತಾಗುತ್ತದೆ ಮುದುಕನು ಬೇರಾರೂ ಅಲ್ಲ ದೇವಶಿಲ್ಪಿ ವಿಶ್ವಕರ್ಮನೆಂದು. ಧನ್ಯತೆಯಿಂದ ರಾಜನ ಕಣ್ಣಿನಿಂದ ನೀರು ಧಾರಾಕಾರವಾಗಿ ಹೋಗುತ್ತದೆ.   

ಜಗನ್ನಾಥ ಪುರಿಯಲ್ಲಿ  ಲಕ್ಷಾಂತರ ಜನರ ಸಮ್ಮುಖದಲ್ಲಿ  ಏಕಕಾಲಕ್ಕೆ  ಎಳೆಯುತ್ತಿರುವ ಮೂರು ರಥಗಳು           
ಕೊನೆಯಲ್ಲಿ ಮೂರು ಅಪೂರ್ಣ ವಿಗ್ರಹಗಳಿರುತ್ತವೆ. ಒಂದು ಶ್ರೀಕೃಷ್ಣನದು, ಇನ್ನೊಂದು ಅವನ ಅಣ್ಣ ಬಲರಾಮನದು ಮತ್ತೊಂದು ಸ್ತ್ರೀವಿಗ್ರಹ, ಅದು ತಂಗಿ ಸುಭದ್ರೆಯದು. ಯಾವುದಕ್ಕೂ ಸರಿಯಾಗಿ ಕೈಗಳಿಲ್ಲ.ಸ್ಪಷ್ಟ ಮುಖಗಳಿಲ್ಲ. ಇದು ದೈವ ಸಂಕಲ್ಪವೆಂದು ನಂಬಿದ ರಾಜ ತಾನು ಈ ಮೊದಲೇ ಕಟ್ಟಿಸಿದ ದೇವಾಲಯದಲ್ಲಿ ಪ್ರತಿಷ್ಥಾಪಿಸಿ ಧನ್ಯತೆಯನ್ನು ಹೊಂದುತ್ತಾನೆ.

ಪ್ರತಿ ಹನ್ನೆರಡು ವರ್ಷಗಳಿಗೆ ಒಂದು ಸಲ ಈ ಕಟ್ಟಿಗೆಯ ಮೂರ್ತಿಗಳನ್ನು ಬದಲಾಯಿಸಲಾಗುತ್ತದೆ. ಹನ್ನೆರಡು ವರ್ಷಗಳ ನಂತರ ಹಳೆಯ ಮೂರ್ತಿಗಳ ದೈವತ್ವ ನಾಶವಾಗುತ್ತದೆಂಬ ನಂಬಿಕೆ ಇದೆ. ಆದ್ದರಿಂದ ಅವುಗಳನ್ನು ಸಂಸ್ಕಾರ ಮಾಡುತ್ತಾರೆ. ಆಶ್ಚರ್ಯವೆಂದರೆ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಸಮುದ್ರದಲ್ಲಿ ತೇಲಿಬರುವ ಕಟ್ಟಿಗೆಯ ದಿಮ್ಮಿಗಳಿಂದಲೇ ಹೊಸ ಮೂರ್ತಿಗಳನ್ನು ನಿರ್ಮಿಸಲಾಗುತ್ತದೆ. ಮನುಷ್ಯನಿಗಿರುವಂತೆ ದೈವಕ್ಕೂ ಹುಟ್ಟು ಸಾವುಗಳನ್ನು ಇಲ್ಲಿ ಮಾಡಲಾಗಿದೆ. ಜಗತ್ತಿನಲ್ಲಿ ಯಾವುದೂ ಪರಿಪೂರ್ಣವಲ್ಲ, ಯಾವುದೂ ಶಾಶ್ವತವಲ್ಲವೆಂಬ ತತ್ವವನ್ನು ಪ್ರಚುರಪಡಿಸಲು ಬಹುಶಃ ಇಂಥ ಸಂಪ್ರದಾಯವನ್ನು ಪೋಷಿಸಿಕೊಂಡು ಬರಲಾಗಿದೆಯೇನೋ?

ಇಲ್ಲಿ ಶ್ರೀ ಕೃಷ್ಣನನ್ನು ಜಗನ್ನಾಥನೆಂದು ಕರೆಯಲಾಗುತ್ತದೆ. ಆದರೆ ಅವನಿಗೆ ಕೈಗಳಿಲ್ಲ, ಕಾಲುಗಳಿಲ್ಲ, ಕಿವಿಗಳಿಲ್ಲ, ಕಣ್ಣುಗಳಿಗೆ ರೆಪ್ಪೆಗಳಿಲ್ಲ. ಆದರೆ ದುಂಡು ಬಟ್ಟಲು ಕಣ್ಣುಗಳು ಹಾಗೂ ಮುಖದಲ್ಲಿರುವ ಮಂದಸ್ಮಿತ ಜಗತ್ತಿನಲ್ಲಿರುವ ಭಕ್ತರನ್ನೆಲ್ಲ ತನ್ನೆಡೆಗೆ ಆಕರ್ಷಿಸಿ ಸೆಳೆದುಕೊಳ್ಳುತ್ತದೆ. 



    

ನೀಲಮಾಧವ ಭಾಗ-೧

ವಿಚಿತ್ರರೂಪದ ಪುರಿ ಜಗನ್ನಾಥ 
ಭಾಗ-೧ 
ಒರಿಸ್ಸಾದಲ್ಲಿರುವ ಜಗನ್ನಾಥ ಪುರಿ ಯಾರಿಗೆ ಗೊತ್ತಿಲ್ಲ? ಅಲ್ಲಿಯ ಬೃಹತ್ ಜಗನ್ನಾಥ ದೇವಾಲಯದಲ್ಲಿನ, ನೀಲವರ್ಣದ ಶ್ರೀಕೃಷ್ಣನ ಮೂರ್ತಿ, ಬೆಳ್ಳಂಬೆಳಗುವ ಬಲರಾಮ, ಅರಿಷಿಣ ಛಾಯೆಯ ಸುಭದ್ರೆಯ ಮೂರ್ತಿಗಳನ್ನು ದೊಡ್ಡ ರಥಗಳಲ್ಲಿ ಕೂಡಿಸಿ ಮೆರವಣಿಗೆ ಮಾಡುವುದನ್ನು ನೋಡಲು ಲಕ್ಷಾಂತರ ಜನ ಸೇರುತ್ತಾರೆ. ವಿಚಿತ್ರವೆಂದರೆ ಮೂರ್ತಿಗಳು ಯಾವುದೋ ಬುಡಕಟ್ಟು ಜನರು ನಿರ್ಮಿಸಿದ ಅರ್ಧಂಬರ್ಧ ಕಟ್ಟಿಗೆಯ ತುಣುಕುಗಳಂತೆ ಕಾಣುತ್ತವೆ. ಹೀಗೇಕೆ? ಎಂದು ಕೇಳಿದರೆ ಅದಕ್ಕೊಂದು ಸುಂದರ ಕಥೆಯಿದೆ. 

ಮಹಾಭಾರತ ಯುದ್ಧ ಮುಗಿದ ಮೂವತ್ತಾರು ವರ್ಷಗಳ ನಂತರ ಕೃಷ್ಣಾವತಾರ ಅಂತ್ಯವಾಗುತ್ತದೆ. ಮರದ ಕೆಳಗೆ ಮಲಗಿ ವಿಶ್ರಮಿಸುತ್ತಿದ್ದ ಕೃಷ್ಣನ ಸುಂದರವಾದ ಕೆಂಪು ಅಂಗಾಲುಗಳನ್ನು ಜಿಂಕೆಯ ಮೂತಿಯೆಂದು ತಿಳಿದ ವ್ಯಾಧ ಜರಾ ಬಿಟ್ಟ ಬಾಣವು ಕೃಷ್ಣನ ಹೆಬ್ಬೆರಳಿಗೆ ತಗಲಿ ಮಾರಣಾಂತಿಕವಾಗಿ ಗಾಯಗೊಳ್ಳುತ್ತಾನೆ. ಕೃಷ್ಣನ ಆಪ್ತಸಖ ಹಾಗೂ ಮೈದುನ ಹಸ್ತಿನಾವತಿಯಿಂದ ಧಾವಿಸಿ ಬರುವಷ್ಟರಲ್ಲಿ ಕೃಷ್ಣಾವತಾರವು ಸಮಾಪ್ತಿಯಾಗಿರುತ್ತದೆ. ದೊಡ್ಡ ಆಲದ ಮರದ ಕೆಳಗೆ ಪವಡಿಸಿದ ಕೃಷ್ಣನ ದೇಹದ ಸುತ್ತಲೂ ಹಕ್ಕಿಗಳು, ಪ್ರಾಣಿಗಳು, ಹುಳುಹುಪ್ಪಟಿಗಳು, ಸುತ್ತಮುತ್ತಲ ಜನರು ಸಹಿಸಲಾರದ ದುಃಖದಿಂದ ರೋದಿಸುತ್ತಿರುತ್ತಾರೆ. ಆದರೂ ಸಹಿಸಿಕೊಂಡ ಅವರು ಕೃಷ್ಣನ ದಿವ್ಯದೇಹವನ್ನು ಅಗ್ನಿಗೆ ಅರ್ಪಿಸುತ್ತಾರೆ. ಅಗ್ನಿದೇವನಿಗೆ ಏನು ಮಾಡಿದರೂ ಕೃಷ್ಣನ ಹೃದಯವನ್ನು ದಹಿಸಲು ಸಾಧ್ಯವಾಗುವುದಿಲ್ಲ. ಅದನ್ನು ಹೊರತುಪಡಿಸಿ ದೇಹವು ಭಸ್ಮವಾಗುತ್ತದೆ. ಚಿತಾಭಸ್ಮವನ್ನು ಸಮುದ್ರದಲ್ಲಿ ವಿಸರ್ಜಿಸಿದಾಗ ಉಳಿದುಕೊಂಡಿದ್ದ ಅವನ ಹೃದಯವು ಸುಂದರವಾದ ಮೂರ್ತಿಯಾಗಿ ರೂಪುಗೊಂಡು ಒರಿಸ್ಸಾದ ಬುಡಕಟ್ಟು ಜನರ ಕೈಗೆ ದೊರಕುತ್ತದೆ. ಅದು ನೀಲಿ ಛಾಯೆಯನ್ನು ಹೊಂದಿದ್ದರಿಂದ ಅದನ್ನು 'ನೀಲಮಾಧವ' ಎಂದು ಕರೆದು ರಹಸ್ಯವಾದ ಗುಹೆಯೊಂದರಲ್ಲಿಟ್ಟು ಅದನ್ನು ಆರಾಧಿಸತೊಡಗುತ್ತಾರೆ.

ಆಗ ಒರಿಸ್ಸಾದ ಮಹಾರಾಜ ಇಂದ್ರದ್ಯುಮ್ನ, ಶ್ರೀಕೃಷ್ಣನ ಪರಮಭಕ್ತ. ವಿಷಯವನ್ನೆಲ್ಲ ತಿಳಿದುಕೊಂಡ ಇಂದ್ರದ್ಯುಮ್ನ ನೀಲಮಾಧವನ ಮೂರ್ತಿಯನ್ನು ತನ್ನ ರಾಜಧಾನಿಗೆ ತಂದು ಪ್ರತಿಸ್ಥಾಪಿಸುವ ಸಲುವಾಗಿ ಭವ್ಯ ದೇವಾಲಯವೊಂದನ್ನು ಕಟ್ಟಿಸುತ್ತಾನೆ. ನೀಲಮಾಧವನ ಮೂರ್ತಿಯನ್ನು ಕೊಡಲು ಬುಡಕಟ್ಟು ಜನರನ್ನು ಕೇಳಿಕೊಳ್ಳುತ್ತಾನೆ. ಆದರೆ ಬುಡಕಟ್ಟು ಜನರು ನೀಲಮಾಧವನನ್ನು ತಮ್ಮ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿರುತ್ತಾರೆ. ಎಷ್ಟೇ ಪ್ರಯತ್ನಿಸಿದರೂ ಬುಡಕಟ್ಟು ಜನರು ಅದನ್ನು ಕೊಡಲೊಪ್ಪುವುದಿಲ್ಲ. ಹತಾಶನಾದ ಇಂದ್ರದ್ಯುಮ್ನನು ನೀಲಮಾಧವನ ಮೂರ್ತಿಯನ್ನು ತರುವ ಜವಾಬ್ದಾರಿಯನ್ನು ತನ್ನ ಆಸ್ಥಾನದ ಯುವ ಮುತ್ಸದ್ದಿ  ವಿದ್ಯಾಪತಿಗೆ ಒಪ್ಪಿಸುತ್ತಾನೆ.

ವಿದ್ಯಾಪತಿ ಬಹಳ ಚತುರ ಹಾಗೂ ಸುಂದರ ಯುವಕ. ತನ್ನ ರಾಜ ಹೇಳಿದ ಕೆಲಸವನ್ನು ಮಾಡಲು ಹಂಚಿಕೆಯೊಂದನ್ನು ಮಾಡುತ್ತಾನೆ. ಅವನು ಬುಡಕಟ್ಟು ಜನರ ಗುಡಿಸಲುಗಳಲ್ಲಿ ಮಾರುವೇಷದಿಂದ ಇರತೊಡಗುತ್ತಾನೆ. ಬುಡಕಟ್ಟು ಜನರ ನಾಯಕ ವಿಸ್ವವಸು. ಅವನಿಗೆ ಲಲಿತೆಯೆಂಬ ಸುಂದರ, ಸುಶೀಲ ಮಗಳಿರುತ್ತಾಳೆ. ವಿಶ್ವವಸು ತನ್ನ ಮಗಳನ್ನು ಬಹಳ   ಪ್ರೀತಿಸುತ್ತಿರುತ್ತಾನೆ. ಈ ವಿಷಯವನ್ನು ಅರಿತ ವಿದ್ಯಾಪತಿಯು ಸ್ವಲ್ಪ ಸಮಯದಲ್ಲೇ  ಲಲಿತೆಯ ಮನಸ್ಸನ್ನು ಗೆದ್ದುಕೊಳ್ಳುತ್ತಾನೆ. ವಿಷಯವು ವಿಶ್ವವಸುವಿಗೆ ಗೊತ್ತಾಗಿ ವಿದ್ಯಾಪತಿಗೆ ತನ್ನ ಮಗಳನ್ನು ಕೊಟ್ಟು ಮಾಡುವೆ ಮಾಡಲು ಅವನು ನಿರ್ಧರಿಸುತ್ತಾನೆ. ಆದರೆ ಜಾಣ ವಿದ್ಯಾಪತಿ ತನಗೆ ನೀಲಮಾಧವನ ದರ್ಶನ ಮಾಡಿಸಿದರೆ ಮಾತ್ರ ತಾನು ಲಲಿತೆಯನ್ನು ಮಾಡುವೆ ಮಾಡಿಕೊಳ್ಳುತ್ತೇನೆಂದು ಹೇಳುತ್ತಾನೆ. ಮನಸ್ಸಿಲ್ಲದಿದ್ದರೂ ಮಗಳ ಮೇಲಿನ ಮಮತೆಯಿಂದ ನೀಲಮಾಧವನ ದರ್ಶನ ಮಾಡಿಸುತ್ತೇನೆ ಆದರೆ ದಾರಿ ಗೊತ್ತಾಗದಂತೆ ಎರಡೂ ಕಣ್ಣುಗಳನ್ನು ಭದ್ರವಾಗಿ ಕಟ್ಟಿ ದಾರಿ ತಿಳಿಯದಂತೆ ಕರೆದುಕೊಂಡು ಹೋಗುತ್ತೇನೆ ಎಂದಾಗ ವಿದ್ಯಾಪತಿಯು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗುತ್ತದೆ.

ಬುಡಕಟ್ಟು ಜನರ ಗುಹಯಿದ್ದ ಸ್ಥಳ ಒರಿಸ್ಸಾದ ನಯಾಘರ್ ಜಿಲ್ಹೆಯ 
ಕಾಂತಿಲೋದಲ್ಲಿ ಈಗ ಇರುವ  ನೀಲಮಾಧವ ದೇವಸ್ಥಾನ 
ಆದರೆ ವಿದ್ಯಾಪತಿ ಇನ್ನೂ ಜಾಣ. ಕಣ್ಣುಗಳನ್ನು ಕಟ್ಟಿ ಒಯ್ಯುತ್ತಿರುವಾಗ ಈ ಮೊದಲೇ ಗುಟ್ಟಾಗಿ ತನ್ನ ಕಿಸೆಯಲ್ಲಿ ತುಂಬಿಕೊಂಡು ಬಂದಿದ್ದ ಸಾಸಿವೆ ಕಾಳುಗಳನ್ನು ದಾರಿಯುದ್ದಕ್ಕೂ ಚೆಲ್ಲಿಕೊಂಡು ನಡೆಯುತ್ತಾನೆ. ಇದು ಮುಗ್ಧ ವಿಶ್ವವಸುವಿಗೆ ಗೊತ್ತಾಗುವುದೇ ಇಲ್ಲ.

ಮಳೆಗಾಲ ಬಂದಾದ ಮೇಲೆ ವಿದ್ಯಾಪತಿಯು ಚೆಲ್ಲಿದ್ದ ಸಾಸಿವೆ ಕಾಲುಗಳು ಸಸಿಗಳಾಗಿ ಬೆಳೆದು ಹಳದಿ ಹೂವುಗಳು ಸಾಲುಸಾಲಾಗಿ ನೀಲಮಾಧವನ ಗುಹೆಯವರೆಗೂ ಬೆಳೆದು ನಿಂತಿರುತ್ತವೆ. ವಿದ್ಯಾಪತಿಗೆ ದಾರಿ ಸ್ಪಷ್ಟವಾಗಿ ಗೋಚರಿಸುತ್ತದೆ. ವಿಷಯವನ್ನು ತನ್ನ ರಾಜ ಇಂದ್ರದ್ಯುಮ್ನನಿಗೆ ತಿಳಿಸುತ್ತಾನೆ. ನೀಲಮಾಧವನನ್ನು ವಶಪಡಿಸಿಕೊಳ್ಳಲು ಕಾತುರತೆಯಿಂದ ಕಾಯುತ್ತಿದ್ದ ಇಂದ್ರದ್ಯುಮ್ನ ದೊಡ್ಡ ಸೈನ್ಯದೊಂದಿಗೆ ಬುಡಕಟ್ಟು ಜನರ ಮೇಲೇರಿ ಬರುತ್ತಾನೆ. ಬುಡಕಟ್ಟು ಜನರೆಲ್ಲಾ ಒಟ್ಟಾಗಿ ರಾಜನಿಗೆ ಮನವಿ ಮಾಡಿಕೊಂಡು ನೀಲಮಾಧವನನ್ನು ಇಲ್ಲಿಯೇ ಇರಗೊಡಲು ಪ್ರಾರ್ಥಿಸುತ್ತಾರೆ. ಅಷ್ಟರಲ್ಲಿ ಲಲಿತೆಯ ನಿಷ್ಕಳಂಕ ಪ್ರ್ರೀತಿಯಿಂದಾಗಿ ವಿದ್ಯಾಪತಿಯ ಮನಸ್ಸೂ ಪರಿವರ್ತನೆಯಾಗಿರುತ್ತದೆ. ಅವನೂ ಇಂದ್ರದ್ಯುಮ್ನನನ್ನು ಪರಿಪರಿಯಾಗಿ ಪ್ರಾರ್ಥಿಸುತ್ತಾನೆ. ಆದರೆ ದುರಹಂಕಾರಿಯಾದ ರಾಜನು ಯಾರ ಮಾತನ್ನೂ ಕೇಳುವುದಿಲ್ಲ. ದುಸ್ಸಾಹಸದಿಂದ ನೀಲಮಾಧವನಿರುವ ಗುಹೆಯನ್ನು ಪ್ರವೇಶಿಸುತ್ತಾನೆ. ಆದರೆ ದೈವ ಸಂಕಲ್ಪವೇ ಬೇರೆಯಾಗಿರುತ್ತದೆ. ಅಲ್ಲಿ ನೀಲಮಾಧವನ ವಿಗ್ರಹವಿರುವುದೇ ಇಲ್ಲ. ಅದು ಅದೃಶ್ಯವಾಗಿಬಿಟ್ಟಿರುತ್ತದೆ.      










ಗುರುವಾರ, ಫೆಬ್ರವರಿ 2, 2012

ವಿಶ್ವಾಮಿತ್ರ-ಜಮದಗ್ನಿ-ಪರಶುರಾಮ

  
ಅದಲುಬದಲಾದ ಚರುಗಳು 


ಗಾಧಿರಾಜ ಚಂದ್ರವಂಶದ ಪ್ರಸಿದ್ಧ ರಾಜರಲ್ಲೊಬ್ಬ. ಇವನಿಗೆ ಸತ್ಯವತಿ ಎಂಬ ಸುಂದರವಾದ ಗುಣವತಿ ಮಗಳಿದ್ದಳು. ಅವಳ ಸೌಂದರ್ಯ ಹಾಗೂ ಸದ್ಗುಣಗಳು ಲೋಕದಲ್ಲೆಲ್ಲಾ ಪ್ರಸಿದ್ಧಿಗೊಂಡು ಅವಳನ್ನು ಮದುವೆಯಾಗಲು ಅನೇಕ ರಾಜಕುಮಾರರು ಹಾತೊರೆಯುತ್ತಿದ್ದರು. 

ಹತ್ತಿರದ ಕಾಡಿನಲ್ಲಿ ಋಚೀಕನೆಂಬ ಋಷಿ ತಪಸ್ಸು, ಹೋಮ-ಹವನಗಳನ್ನು ಮಾಡುತ್ತಾ  ಸಿದ್ಧಿಪುರುಷನೆನಿಸಿದ್ದನು. ಒಂದು ದಿನ ಅವನಿಗೆ ಸ್ವಪ್ನ ಸೂಚನೆಯಾಗಿ ವಿಷ್ಣುಭಗವಾನನು ಸ್ವತಃ ಅವನ ವಂಶದಲ್ಲಿ  ಅವತರಿಸುವುದಾಗಿ ಆಶ್ವಾಸನೆಯನ್ನಿತ್ತನು. ಋಚೀಕನಿಗೆ ಬಹಳ ಹರ್ಷವಾಯಿತು. ಶ್ರೇಷ್ಠ ಕನ್ನ್ಯೆಯೊಬ್ಬಳನ್ನು ಮದುವೆಯಾಗಿ ವಂಶೋದ್ಧಾರಕ್ಕೆ ಕಾರಣವಾಗಬೇಕೆಂದು ನಿರ್ಧರಿಸಿದನು. ಅನುರೂಪಳಾದ ಕನ್ನ್ಯೆಯನ್ನು ಶೋಧಿಸಲು ಪ್ರಯತ್ನಿಸಿದಾಗ ಗಾಧಿರಾಜನ ಮಗಳು ಸತ್ಯವತಿಯ ಬಗ್ಗೆ ತಿಳಿಯಿತು.

ಋಚೀಕ ಋಷಿ 
ಋಚೀಕನು ತಕ್ಷಣ ಗಾಧಿರಾಜನನ್ನು ಭೇಟಿಯಾಗಿ ಸತ್ಯವತಿಯನ್ನು ತನಗೆ ಕೊಟ್ಟು ಮಾಡುವೆ ಮಾಡಿಕೊಡಬೇಕೆಂದು ಕೇಳಿಕೊಂಡನು. ಗಾಧಿರಾಜನು ತನ್ನ ಮಗಳನ್ನು ಋಚೀಕನಿಗೆ ಕೊಡಲು ಕರಾರೊಂದನ್ನು ಮುಂದಿರಿಸಿದ. ಒಂದು ಕಿವಿ ಮಾತ್ರ ಕಪ್ಪಗಿದ್ದು ಉಳಿದೆಲ್ಲ ಭಾಗವೂ ಅತ್ಯಂತ ಶುಭ್ರವಾಗಿರುವ ಶ್ವೇತ ಬಣ್ಣದ ಒಂದು ಸಹಸ್ರ ಕುದುರೆಗಳನ್ನು ಕನ್ಯಾಶುಲ್ಕವಾಗಿ ಕೊಟ್ಟರೆ ತಾನು ತನ್ನ ಮಗಳನ್ನು ಕೊಡುವುದಾಗಿ ಹೇಳಿದ. ಇಂತಹ ಸಾವಿರ ಕುದುರೆಗಳಿದ್ದವರನ್ನು ಯಾರೂ ಯುದ್ಧದಲ್ಲಿ ಸೋಲಿಸಲಾರರು ಎಂದು ಆಗ ನಂಬಿಕೆಯಿತ್ತು. ಆದರೆ ಋಚೀಕನಿಗೆ ಇದು ಬಹಳ ಸುಲಭದ ಕೆಲಸವಾಯಿತು. ತನ್ನ ತಪೋಬಲವನ್ನು ಉಪಯೋಗಿಸಿ ವರುಣನಿಂದ ಇಂತಹ ಸಾವಿರ ಕುದುರೆಗಳನ್ನು ಪಡೆದುಕೊಂಡು ಗಾಧಿರಾಜನಿಗೆ ತಂದುಕೊಟ್ಟ. ಸತ್ಯವತಿಯು ಕೂಡಾ ಋಚೀಕನ ತೇಜಸ್ಸಿಗೆ ಮಾರು ಹೋಗಿದ್ದಳು. ಗಾಧಿರಾಜನು ಸಂತೋಷದಿಂದಲೇ ತನ್ನ ಮಗಳು ಸತ್ಯವತಿಯನ್ನು ಋಚೀಕನಿಗೆ ಧಾರೆ ಎರೆದು ಮಾಡುವೆ ಮಾಡಿ ಕೊಟ್ಟ.

ಗಾಧಿರಾಜನಿಗೆ ಗಂಡು ಸಂತಾನವಿರಲಿಲ್ಲ. ಒಂದು ದಿನ  ಈ ವಿಷಯವನ್ನು ಅಳಿಯನ ಮುಂದೆ ಪ್ರಸ್ತಾಪಿಸಿದ ಗಾಧಿರಾಜನು  ರಾಜ್ಯದ ಉತ್ತರಾಧಿಕಾರಿಯಾಗಬಲ್ಲ ಕ್ಷಾತ್ರಬಲವುಳ್ಳ ಶೂರ ಪುತ್ರನೊಬ್ಬ ಜನಿಸುವಂತೆ ಅನುಗ್ರಹ ಮಾಡಬೇಕೆಂದು ಕೇಳಿಕೊಂಡ. ಪ್ರಾರ್ಥನೆಯನ್ನು ಮನ್ನಿಸಿದ ಋಚೀಕನು ಮಂತ್ರಶಕ್ತಿಯಿಂದ ಎರಡು ಚರುಗಳನ್ನು ತಯಾರಿಸಿದ. ಒಂದು ಅತ್ತೆಗಾಗಿ ಹಾಗೂ ಇನ್ನೊಂದು ತನ್ನ ಹೆಂಡತಿಗಾಗಿ ಎಂದು ಬೇರೆ ಬೇರೆಯಾಗಿ ಇಟ್ಟು ಧ್ಯಾನಕ್ಕೆ ಕುಳಿತುಕೊಂಡ.

ಹೆಂಗಸರದು ಬಹಳ ಸಂಶಯ ಸ್ವಭಾವ. ತನ್ನ ಪತ್ನಿಯ ಸಲುವಾಗಿ ಶ್ರೇಷ್ಠ ಚರುವನ್ನು ಅಳಿಯನು ತಯಾರಿಸಿರಬೇಕೆಂಬ ಸಂಶಯವು ಸತ್ಯವತಿಯ ತಾಯಿಯನ್ನು ಕಾಡತೊಡಗಿತು. ತನ್ನ ಮಗಳು ಸತ್ಯವತಿಯನ್ನು ಕಾಡಿ ಬೇಡಿ ಅವಳ ಸಲುವಾಗಿ ಅಭಿಮಂತ್ರಿಸಿದ ಚರುವನ್ನು ತಿಂದುಬಿಟ್ಟಳು. ಮುಗ್ಧ ಸ್ವಭಾವದ ಸತ್ಯವತಿಯು ತನ್ನ ತಾಯಿಗಾಗಿ ತಯಾರಿಸಿದ ಚರುವನ್ನು ಅನಿವಾರ್ಯವಾಗಿ ತಿನ್ನಬೇಕಾಯಿತು. ನಂತರ ಈ ವಿಷಯವು ಋಚೀಕನಿಗೆ ತನ್ನ ಪತ್ನಿಯ ಮುಖೇನ ತಿಳಿದಾಗ ಅವನು ಬಹಳ ನೊಂದುಕೊಂಡನು. 


"ನೀನು ಬಹಳ ಅನರ್ಥ ಮಾಡಿಕೊಂಡೆ, ಚರುವಿನ ವಿನಿಮಯದಿಂದಾಗಿ ನಿನ್ನ ಹೊಟ್ಟೆಯಲ್ಲಿ ದಂಡಧರನಾದ ಕ್ಷಾತ್ರ ತೇಜಸ್ಸು ಹೊಂದಿರುವ ಮಗನು ಹುಟ್ಟುವನು. ಮತ್ತು ನಿನ್ನ ತಮ್ಮನು ಶ್ರೇಷ್ಥ ಬ್ರಹ್ಮರ್ಷಿಯಾಗುವನು". ಎಂದು ಹೇಳಲಾಗಿ ಸತ್ಯವತಿಯು ಬಹಳ ಗಾಬರಿಯಾಗಿ "ಹೀಗಾಗಕೂಡದು" ಎಂದು ಗಂಡನಲ್ಲಿ ಬಹಳವಾಗಿ ಪ್ರಾರ್ಥಿಸಿ ರೋದಿಸತೊಡಗಿದಳು. ಮಹಾ  ಕರುಣಾಶಾಲಿಯಾದ  ಋಚೀಕನು ಸತ್ಯವತಿಯನ್ನು ಸಂತೈಸಿ "ಒಳ್ಳೆಯದು ನಿನ್ನ ಮಗನ ಬದಲಾಗಿ ನಿನ್ನ ಮೊಮ್ಮಗನು ಘೋರ ಪ್ರಕೃತಿಯ ತೇಜಸ್ವಿ ಪುರುಷನಾಗುವನು" ಎಂದು ಆಶ್ವಾಸನೆಯನ್ನು ನೀಡಿದನು. ಮಹರ್ಷಿಯ ಮಾತು ಸುಳ್ಳಾಗಲಿಲ್ಲ 

ಭಗವಾನ್ ಪರಶುರಾಮ 
ನಂತರ ಸಕಾಲದಲ್ಲಿ ಗಾಧಿಮಹಾರಾಜನಿಗೆ ವಿಶ್ವಾಮಿತ್ರನೆಂಬ ಪರಮ ತೇಜಸ್ವಿಯು ಮಗನಾಗಿ ಜನಿಸಿದನು. ಸತ್ಯವತಿಯು ಜಮದಗ್ನಿ ಎಂಬ ಮಗನನು ಹಡೆದಳು. ಜಮದಗ್ನಿಯು ಬ್ರಹ್ಮರ್ಷಿಯಾಗಿ ರೇಣು ಎಂಬ ಋಷಿಯ ಪುತ್ರಿ ರೇಣುಕೆಯನ್ನು ಮದುವೆ ಮಾಡಿಕೊಂಡು ಪರಶುರಾಮನೆಂಬ ಕ್ಷಾತ್ರ ತೇಜಸ್ಸುಳ್ಳ ಮಗನನ್ನು ಪಡೆದನು. ಪರಶುರಾಮನು ವಿಷ್ಣುವಿನ ಆರನೆಯ ಅವತಾರ. ಋಚೀಕನಿಗೆ ಆದ ಸ್ವಪ್ನವೂ ಸತ್ಯವಾಯಿತು.

ಹೀಗೆ ಪರಶುರಾಮದೇವರ ಅವತಾರವಾಗಿ ದುಷ್ಟ ಸಂಹಾರಕ್ಕೆ ಕಾರಣವಾಯಿತು. ಮತ್ತು ಕ್ಷತ್ರಿಯ ಹುಟ್ಟು ಪಡೆದರೂ ಮುಂದೆ ಮಹಾಬ್ರಾಹ್ಮಣನೆಂದೆನಿಸಿ ವಿಶ್ವಾಮಿತ್ರನು ಮಹಾಮಂತ್ರವಾದ ಗಾಯತ್ರಿ ಮಂತ್ರ ದೃಷ್ಟ್ಹಾರರಾಗಿ ಲೋಕ ಕಲ್ಯಾಣಕ್ಕೆ ಕಾರಣರಾದರು.    
          

ಬುಧವಾರ, ಜನವರಿ 25, 2012

ಮರುತ ಗಣ ದೇವತೆಗಳು

ದಿತಿದೇವಿಯ ನಲವತ್ತೊಂಭತ್ತು ಮಕ್ಕಳು

     ಕಶ್ಯಪರು ಬ್ರಹ್ಮರ್ಷಿಗಳು. ಲೋಕಕಲ್ಯಾಣಕ್ಕಾಗಿ ಅವರಷ್ಟು ತ್ಯಾಗವನ್ನು ಯಾರೂ ಮಾಡಿಲ್ಲ. ಅವರು ದೇವತೆಗಳ, ದೈತ್ಯರ, ಪಕ್ಷಿ, ಪ್ರಾಣಿ, ಸರ್ಪ, ಗಿಡ-ಬಳ್ಳಿ ಮುಂತಾದ ಎಲ್ಲ ಜೀವಿಗಳ ವಂಶಕ್ಕೆ ಕಾರಣರಾಗಿದ್ದಾರೆ. ಅವರಿಗೆ ಒಟ್ಟು ಹದಿಮೂರು ಜನ ಮಡದಿಯರು. ಅದಿತಿ ಮೊದಲ ಹೆಂಡತಿ. ನಂತರ ದಿತಿ, ದನು, ಅರಿಷ್ಟಾ, ಸುರಸಾ, ಖಷಾ, ಸುರಭಿ, ವಿನುತಾ, ತಾಮ್ರಾ, ಕ್ರೋಧವಶಾ, ಇರಾ, ಕದ್ರು, ಮತ್ತು ಮುನಿ.

ದಿತಿದೇವಿಯ  ಮನೆಗೆ ಹೊರಟಿರುವ  ಇಂದ್ರದೇವ 
     ದಿತಿದೇವಿಯ ಮಕ್ಕಳೆಲ್ಲ ಹಿರಣ್ಯಾಕ್ಷ, ಹಿರಣ್ಯಕಶಿಪು, ಸಿಂಹಿಣಿ ಮೊದಲಾದ ದೈತ್ಯರು. ಅವರೆಲ್ಲಾ ದೇವತೆಗಳೊಡನೆ ಯುದ್ಧ ಮಾಡಿ ಸತ್ತುಹೋಗಿದ್ದರು. ದಿತಿಗೆ ಇಂದ್ರನನ್ನು ಸೋಲಿಸಬಲ್ಲ ಪರಾಕ್ರಮಿ ಮಗನೊಬ್ಬ ಬೇಕಾಗಿದ್ದ. ಸಮಯ ನೋಡಿ ದಿತಿದೇವಿಯು ಗಂಡ ಕಶ್ಯಪರ ಮುಂದೆ ತನ್ನ ಬಯಕೆಯನ್ನು ಹೇಳಿಕೊಂಡಳು. ಕಶ್ಯಪರು ತ್ರಿಕಾಲಜ್ಞಾನಿಗಳು. ಅವರು ದಿತಿದೇವಿಯ ಬಯಕೆಯನ್ನು ನಿರಾಕರಿಸಲಿಲ್ಲ. ಆದರೆ ಕಠಿಣವಾದ ನಿಯಮಗಳನ್ನು ಹೇಳಿದರು. ಒಂದು ನೂರು ವರ್ಷಗಳ ವರೆಗೆ ಗರ್ಭವನ್ನು ಧರಿಸಿ ಶುಚಿತ್ವ,ವೃತ, ಆಚರಣೆಗಳಿಂದ ನಿಷ್ಠಳಾಗಿ ನಡೆದುಕೊಂಡರೆ ಮಾತ್ರ ನಿನ್ನ ಬಯಕೆ ಈಡೇರಲು ಸಾಧ್ಯವೆಂದು ಹೇಳಲಾಗಿ ದಿತಿದೇವಿಯು ಒಪ್ಪಿಕೊಂಡಳು. ಆಡಿದ ಮಾತಿನಂತೆ ಕಶ್ಯಪರು ಗರ್ಭಾದಾನ ಮಾಡಿ ತಪಸ್ಸು ಮಾಡುವ ಸಲುವಾಗಿ ಕಾಡಿಗೆ ಹೊರಟುಹೋದರು.


     ಇತ್ತ ದಿತಿದೇವಿಯು ಕಶ್ಯಪರಿಗೆ ಕೊಟ್ಟ ಮಾತಿನ ಪ್ರಕಾರ ವೃತನಿಷ್ಠಳಾಗಿ ಬಹಳ ಜತನದಿಂದ ಗರ್ಭಸ್ಥ ಮಗುವನ್ನು ಕಾಪಾದಿಕೊಂದಿದ್ದಳು. ಹೇಗೋ ವಿಷಯವು ಇಂದ್ರನಿಗೆ ತಿಳಿಯಿತು. ತನಗೆ ಶತ್ರುವಾಗಲಿರುವ ಮಗುವನ್ನು ಹೇಗಾದರೂ ಮಾಡಿ ನಾಶ ಮಾಡಬೇಕೆಂದು ಅವನು ಉಪಾಯ ಮಾಡಿದನು. ಬಾಲ ಸೇವಕನ ವೇಷ ಧರಿಸಿ ಅವನು ದಿತಿಯ ಹತ್ತಿರ ಕೆಲಸಕ್ಕೆ ಸೇರಿದನು. ಕಶ್ಯಪರು ಹೇಳಿದ ನೂರು ವರ್ಷಗಳಲ್ಲಿ ತೊಂಭತ್ತು ವರ್ಷಗಳು ಸರಿಯಾಗಿ ನಡೆದವು.ಇಂದ್ರನು ಬಹಳ ಸಮಾಧಾನದಿಂದ  ಅಲ್ಲಿಯೇ ಸೇವಕನ ವೇಷದಲ್ಲಿದ್ದು ದಿತಿದೇವಿಯಿಂದ ವೃತಾಚರಣೆಯಲ್ಲಿ ಸ್ವಲ್ಪವಾದರೂ ಲೋಪವಾದರೆ ಸಾಕು, ಗರ್ಭಸ್ಥ ಮಗುವನ್ನು ಅದೇ ನೆವದಿಂದ ಕೊಂದುಬಿಡಲು ಆಲೋಚಿಸುತ್ತಿದ್ದನು. 

ಮರುತ ಗಣ ದೇವತೆಗಳು 
   ಅಂತೂ ಅವನಿಗೆ ಕಾಲವೊಂದು ಕೂಡಿಬಂತು. ಒಂದು ರಾತ್ರಿ ದಿತಿ ಶೌಚ ಶುದ್ಧಿಗಾಗಿ ಹೋಗಿ ಆಯಾಸದಿಂದ ಕೈಕಾಲು ತೊಳೆದುಕೊಳ್ಳದೆ ಹಾಗೆಯೇ ಮಲಗಿಬಿಟ್ಟಳು. ಈ ಸಣ್ಣ ದೋಷವನ್ನೇ ನೆವ ಮಾಡಿಕೊಂಡ ಇಂದ್ರ ದಿತಿಯ ಗರ್ಭಸ್ಥ ಮಗುವನ್ನು ಕೊಂದು ಹಾಕಲು ಆಲೋಚಿಸಿ ಅವಳ ಗರ್ಭವನ್ನು ಸೂಕ್ಷ್ಮರೂಪದಿಂದ ಪ್ರವೇಶಿಸಿದ. ಆದರೆ ಪರಮಾತ್ಮನ ಸಂಕಲ್ಪ ಬೇರೆಯೇ ಇತ್ತು.

   ತನ್ನ ವಜ್ರಾಯುಧದಿಂದ ದಿತಿಯ ಹೊಟ್ಟೆಯಲ್ಲಿದ್ದ ಪಿಂಡಕ್ಕೆ ಬಲವಾಗಿ ಹೊಡೆದಾಗ ಅದು ಏಳು ತುಂಡುಗಳಾಯಿತು. ವಜ್ರಾಯುಧದ ಆಘಾತದ ನೋವನ್ನು ತಾಳಲಾರದೆ ಅವು ಒಂದೇ ಸವನೆ ರೋದಿಸತೊದಗಿದವು. ಆಗ ಇಂದ್ರನು ಅವುಗಳನ್ನು ಸಮಾಧಾನಿಸುತ್ತಾ 'ಮಾರೋದಿಹಿ'(ಅಳಬೇಡಿ) ಎಂದು ಹೇಳುತ್ತಾ ಮತ್ತೊಮ್ಮೆ ವಜ್ರಾಯುಧದಿಂದ ಪ್ರಹಾರ ಮಾಡುತ್ತಾನೆ. ಈ ಸಲ ಏಟು ಬಹಳ ಪ್ರಬಲವಾದ್ದರಿಂದ ಒಂದೊಂದು ತುಂಡು ಏಳು ಹೋಳಾಗಿ ಒಟ್ಟು ನಲವತ್ತೊಂಭತ್ತು   ತುಂಡುಗಳಾಗಿ ಎಲ್ಲವೂ ಮತ್ತಷ್ಟು ಜೋರಾಗಿ ಅಳತೊಡಗುತ್ತವೆ. ಇಂದ್ರನು  ಪುನಃ 'ಮಾರೋದಿಹಿ" ಎಂದು ಸಮಾಧಾನ ಮಾಡಿ ದಿತಿಯ ಉದರದಿಂದ ಹೊರಗೆ ಬಂದುಬಿಡುತ್ತಾನೆ. 

   ನಂತರ ದಿತಿದೇವಿಯು ೪೯ ಜನ ಅತ್ಯಂತ ತೇಜೋವಂತರಾದ ಮಕ್ಕಳನ್ನು ಹೆರುತ್ತಾಳೆ. ದಿವ್ಯ ದೃಷ್ಟಿಯಿಂದ ಎಲ್ಲವನ್ನೂ ತಿಳಿದುಕೊಂಡ ಕಶ್ಯಪರು ಅಲ್ಲಿಂದಲೇ ಮಕ್ಕಳನ್ನು ಆಶೀರ್ವದಿಸುತ್ತಾರೆ. ಅವರ ಪ್ರಭಾವದಿಂದಾಗಿ ಇಂದ್ರನ ಮೇಲಿದ್ದ ಅವಳ ದ್ವೇಷವು ಹೊರಟುಹೋಗುತ್ತದೆ. ಇದನ್ನರಿತ ಇಂದ್ರ ದಿತಿದೇವಿಯ ಮಕ್ಕಳಿಗೆ ತನ್ನ ಅಮೃತ ಹಸ್ತವನ್ನು ಕೊಟ್ಟು ಕಾಪಾಡುತ್ತಾನೆ. ಇಂದ್ರನು 'ಮಾರೋದಿಹಿ' ಎಂದು ಮಕ್ಕಳನ್ನು ಸಮಾಧಾನಿಸಿದ್ದರಿಂದ ಹುಟ್ಟಿದ ೪೯ ಮಕ್ಕಳ ಗುಂಪು ಮರುತ ಗಣ ದೇವತೆಗಳು  ಎಂದು ಪ್ರಸಿದ್ಧರಾಗುತ್ತಾರೆ. ಹೀಗೆ ದಿತಿದೇವಿಯು ವೃತ ಲೋಪ ಮಾಡಿದರೂ ಕಶ್ಯಪರ ಅನುಗ್ರಹದಿಂದ ಒಳ್ಳೆಯದೇ ಆಗುತ್ತದೆ. ಇಂದ್ರನ ಶತ್ರುಗಳಾಗಬೇಕಿದ್ದವರೆಲ್ಲ ಅವನ ಮಿತ್ರರಾಗಿ ದೇವಲೋಕವನ್ನು ಸೇರುತ್ತಾರೆ. ಹೀಗೆ ದಿತಿದೇವಿಯಲ್ಲಿ ಕಶ್ಯಪರಿಂದ ದೇವಗಣವೊಂದು ಹುಟ್ಟಿ ಅವಳಿಗೆ ಬಹುವಾಗಿ ಸಂತೋಷವಾಗುತ್ತದೆ. 
  











   


ಗುರುವಾರ, ಜನವರಿ 19, 2012

ಸೂರ್ಯನನ್ನು ಸಾಣೆ ಹಿಡಿದ ವಿಶ್ವಕರ್ಮ

ಸೂರ್ಯ-ಸಂಜ್ಞಾ-ಛಾಯಾ  

     ಸೂರ್ಯ ಅತ್ಯಂತ ತೇಜಸ್ವಿ ದೇವತೆ. ಅವನು ಸಾಕ್ಷಾತ್ ಭಗವಾನ್ ನಾರಾಯಣನ ಸ್ವರೂಪ. ದೇವತೆಗಳ  ಬಡಗಿಯಾದ ವಿಶ್ವಕರ್ಮನಿಗೆ ಸಂಜ್ಞಾ ಎಂಬ ಸುಂದರ, ಸುಶೀಲ ಮಗಳು ಇರುತ್ತಾಳೆ. ಸೂರ್ಯದೇವನ ತೇಜಸ್ಸಿಗೆ ಮಾರುಹೋದ ವಿಶ್ವಕರ್ಮ ತನ್ನ ಮಗಳು ಸಂಜ್ಞಾಳನ್ನು ಸೂರ್ಯನಿಗೆ ಕೊಟ್ಟು ಮದುವೆ ಮಾಡುತ್ತಾನೆ. ಸೂರ್ಯ ಹಾಗೂ ಸಂಜ್ಞಾರಿಗೆ ಮೂರು ಮಕ್ಕಳು ಹುಟ್ಟುತ್ತಾರೆ. ಮೊದಲನೆಯ ಮಗ ಮನು, ಆಮೇಲೆ ಅವಳಿ ಜವಳಿ ಮಕ್ಕಳು ಯಮ ಮತ್ತು ಯಮಿ. ಬರಬರುತ್ತಾ ಸೂರ್ಯನ  ತೇಜಸ್ಸು ಹೆಚ್ಚತೊಡಗುತ್ತದೆ. ಸಂಜ್ಞಾ ಬಲು ಸೂಕ್ಷ್ಮ ಹೆಂಗಸು ಅವಳಿಗೆ ಸೂರ್ಯನ ಪ್ರಖರ ತೇಜಸ್ಸನ್ನು ತಾಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಗಂಡ ತೇಜಃಪುಂಜನಾದಷ್ಟೂ ಸಂಜ್ಞಾಳಿಗೆ ಹಿಂಸೆಯಾಗತೊಡಗುತ್ತದೆ.   
     
     ಸಂಜ್ಞಾ ಒಂದು ಉಪಾಯವನ್ನು ಮಾಡುತ್ತಾಳೆ. ತನ್ನ ನೆರಳಿನಿಂದ ಪ್ರತಿರೂಪವೊಂದನ್ನು ಮಾಡಿ ಅದಕ್ಕೆ ಜೀವ ತುಂಬಿ ತನ್ನ  ಸ್ಥಾನದಲ್ಲಿ ಅವಳನ್ನು ಬಿಟ್ಟು ತಾನು ತಪಸ್ಸು ಮಾಡಲು ಗುಟ್ಟಾಗಿ ತೆರಳುತ್ತಾಳೆ. ಸಂಜ್ಞೆಯ ನೆರಳು ಛಾಯಾ ಸ್ವಾಭಾವಿಕವಾಗಿ ಅವಳಂತೆಯೇ ಇರುತ್ತಾಳೆ. ಆದ್ದರಿಂದ ಸೂರ್ಯನಿಗೆ ಸ್ವಲ್ಪವೂ ಸಂಶಯ ಬರುವುದಿಲ್ಲ. ಅವನು ಛಾಯಾದೇವಿಯೊಂದಿಗೆ ಸರಸದಿಂದಲೇ ಸಂಸಾರ ಮಾಡುತ್ತಾನೆ. ಛಾಯಾದೇವಿಗೆ ಸೂರ್ಯನಿಂದ ಮೂವರು ಮಕ್ಕಳು ಹುಟ್ಟುತ್ತಾರೆ. ಮೊದಲನೆಯವ ಶನಿ, ಎರಡನೆಯವ ಮತ್ತೊಬ್ಬ ಮನು ಮೂರನೆಯವಳು ತಪತಿ. ಈ ಮನು ತನ್ನ ಅಣ್ಣ ಮನುವನ್ನೇ ಸಂಪೂರ್ಣ ಹೋಲುತ್ತಿದ್ದರಿಂದ ಇವನ್ನು ಸಾವರ್ಣಿಮನು ಎಂದು ಕರೆಯಲಾಗುತ್ತದೆ.


      ಛಾಯಾದೇವಿಯು ತನಗೆ ಮಕ್ಕಳಾಗುವವರೆಗೆ ಸವತಿಯ ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಳು. ತನಗೂ ಮಕ್ಕಳಾದ ಮೇಲೆ ಸಂಜ್ಞೆಯ ಮಕ್ಕಳನ್ನು ಅಸಡ್ಡೆಯಿಂದ ನೋಡಲಾರಂಭಿಸುತ್ತಾಳೆ. ಒಂದು ಸಲ ತನ್ನ ಮಕ್ಕಳೂ ಸವತಿಯ ಮಕ್ಕಳೂ ಜಗಳ ಮಾಡಲಾರಂಭಿಸಿದಾಗ ಸಾರಾಸಾರ ವಿಚಾರ ಮಾಡದೆ ತನ್ನ ಸ್ವಂತ ಮಕ್ಕಳ ಪರವಾಗಿ ನಿಂತು ಮಲಮಗ ಯಮನನ್ನು ಚೆನ್ನಾಗಿ ದಂಡಿಸಿ ಶಾಪ ಕೊಟ್ಟುಬಿಡುತ್ತಾಳೆ.


     ಪ್ರಸಂಗ ಶಾಪ ಕೊಡುವಷ್ಟು ವಿಕೋಪಕ್ಕೆ ಹೋದಾಗ ಸೂರ್ಯನಿಗೆ ಸಂಶಯ ಬರುತ್ತದೆ. ಸ್ವಂತ ಮಗನಿಗೆ ಕೇಡು ಬಯಸಿ ಯಾರಾದರೂ ಶಾಪ ಕೊಡುವುದು ಉಂಟೆ? ಇವಳು ಯಮನಿಗೆ ತಾಯಿಯೇ ಆಗಿರಲಿಕ್ಕಿಲ್ಲವೆಂದುಕೊಂಡು ಅವಳನ್ನು ಗದರಿಸಿ ಕೇಳಿದಾಗ ಛಾಯಾದೇವಿಯು ನಡೆದ ಸಮಾಚಾರವನ್ನು ವಿವರವಾಗಿ ತಿಳಿಸಿಬಿಡುತ್ತಾಳೆ. ಬೆಂಕಿಯ ಬೆಟ್ಟದಂತಿರುವ ನಿಮ್ಮ ಉರಿಯ ಅಪ್ಪುಗೆಯಿಂದ ತಪ್ಪಿಸಿಕೊಳ್ಳಲು ನನ್ನನ್ನು ಇಲ್ಲಿರಿಸಿ ಸಂಜ್ಞಾ ತಪಸ್ಸಿಗೆ ತೆರಳಿದ್ದಾಳೆಂದು ಹೇಳುತ್ತಾಳೆ. ತನ್ನ ಮಡದಿಯ ಪ್ರತಿರೂಪವಾದ ಈ ನೆರಳನಾರಿಯ ಜೊತೆಗಿನ ಮ್ರುಲಾಟ ಇನ್ನು ಸಾಕು ಎಂದು ಸೂರ್ಯನಿಗೆ ಅನ್ನಿಸುತ್ತದೆ. 


     ಜಗತ್ತಿಗೇ ಕಣ್ಣಿನಂತಿರುವ ಸೂರ್ಯನು ತನ್ನ ದಿವ್ಯ ದೃಷ್ಟಿಯಿಂದ ತನ್ನ ಮೂಲ ಮಡದಿ ಇರುವ ತಾಣವನ್ನು ನೋಡುತ್ತಾನೆ. ಅವಳು ಕುದುರೆ ರೂಪದಿಂದ ತನ್ನ ಪತಿಯನ್ನೇ ಕುರಿತು ತಪಸ್ಸು ಮಾಡುತ್ತಿರುತ್ತಾಳೆ. ತಾನೂ ಗಂಡು ಕುದುರೆಯ ರೂಪ ಧರಿಸಿ ಸಂಜ್ಞಾಳ ಹತ್ತಿರ ಬರುತ್ತಾನೆ. ಗಂಡನನ್ನು ಕಂಡ ಕುದುರೆ ರೂಪದಲ್ಲಿದ್ದ ಸಂಜ್ಞಾ ಹರ್ಷಭರಿತಲಾಗುತ್ತಾಳೆ. ಗಂಡ ಹೆಂಡತಿಯ ಪುನರ್ಮಿಲನವಾಗುತ್ತದೆ. ಅವರ ರಾಗರತಿಯ ಫಲವಾಗಿ ಮೂವರು ಮಕ್ಕಳು ಜನಿಸುತ್ತಾರೆ. ಅವಳಿಜವಳಿಗಳಾದ ಅಶ್ವಿನಿ ದೇವತೆಗಳು ಹಾಗೂ ಮೂರನೆಯ ಮಗ ರೇತಸ.


ಗುಜರಾತ್ ನ ವಧೆರಾದಲ್ಲಿರುವ ಸೂರ್ಯ ದೇವಾಲಯ   
     ಅನಂತರ ಸೂರ್ಯದೇವನು ತನ್ನ ಮಡದಿಗೆ ಮೂಲರೂಪ ಧರಿಸಲು ಹೇಳಿ ಅವಳನ್ನು ಕರೆದುಕೊಂಡು ತನ್ನ ಲೋಕಕ್ಕೆ ಬರುತ್ತಾನೆ. ಮಾವ ವಿಶ್ವಕರ್ಮನಿಗೆ ವಿಷಯ ತಿಳಿದು ಚಿಂತೆಗೊಳಗಾಗುತ್ತಾನೆ. ತನ್ನ ಮಗಳೋ ಮೇಣದ ಗೊಂಬೆ ಆದರೆ ಅಳಿಯನೂ ಬೆಂಕಿಯ ಬಣವೆ. ಇದನ್ನು ಸರಿಪಡಿಸಲು ಅವನು ಉಪಾಯವೊಂದನ್ನು ಕಂಡುಹಿಡಿಯುತ್ತಾನೆ. ಹೇಳಿಕೇಳಿ ಅವನು ಸ್ವರ್ಗಲೋಕದ ಬಡಗಿ. ಸೂರ್ಯದೇವನ ಹೆಚ್ಚಿನ ತೆಜಸ್ಸನ್ನೆಲ್ಲಾ ತನ್ನ ಗಾಡಕ್ಕೆ ಹಾಕಿ ಸಾಣೆ ಹಿಡಿಯತೊಡಗುತ್ತಾನೆ. ಸೂರ್ಯನ ವಿರಾಟ್ ಕಾಯವನ್ನೆಲ್ಲ ಕೊರೆದು ತೆಗೆದು ಎಂಟನೆಯ ಒಂದಂಶಕ್ಕೆ ಇಳಿಸುತ್ತಾನೆ. ಹೀಗೆ ವಿಷ್ಣುವಿನ ಸಂಕಲ್ಪದಂತೆ ವಿಶ್ವಕರ್ಮನ ಬೃಹದ್ ಯಂತ್ರದಲ್ಲಿ ಸೂರ್ಯನ ತೆಜೋಗೊಲಕವು ಹದಗೊಂಡು ಸೌಮ್ಯವಾಗುತ್ತದೆ.

    ಹೀಗೆ ಉದುರಿಬಿದ್ದ ತೇಜಸ್ಸಿನ ಖಂಡ ತುಂಡುಗಳನ್ನು ಆಯ್ದುಕೊಂಡ ವಿಶ್ವರ್ಮನು ವಿಷ್ಣುವಿನ ಸಲುವಾಗಿ ಸುದರ್ಶನ ಚಕ್ರವನ್ನು ಮಾಡಿಕೊಡುತ್ತಾನೆ. ಉಳಿದ ಚೂರುಗಳಿಂದ ಶಿವನಿಗೆ ತ್ರಿಶೂಲವನ್ನೂ, ಸ್ಕಂದನ ಶಕ್ತಿ ಆಯುಧವನ್ನೂ, ಕುಬೇರನಿಗೆ ಪುಷ್ಪಕ ವಿಮಾನವನ್ನೂ, ಉಳಿದ ತೆಜಸೀನ ಕಿಡಿಗಳಿಂದ ಎಲ್ಲ ದೇವತೆಗಳಿಗೆ ಶಸ್ತ್ರಾಸ್ತ್ರಗಳನ್ನೂ ತಯಾರಿಸಿಕೊಡುತ್ತಾನೆ.  ಹೀಗೆ ಸೂರ್ಯದೇವನು ಸೌಮ್ಯನಾಗಿ ದೇವತೆಗಳೆಲ್ಲ ವಿವಿಧ ಆಯುಧಗಳನ್ನು ಹೊಂದಿ ತೇಜೋವಂತರಾಗುತ್ತಾರೆ. ಛಾಯಾದೇವಿಯು ಅಂತರ್ಧಾನಳಾಗಿ ತನ್ನ ಮೂಲರೂಪವಾದ ಸಂಜ್ಞಾದೇವಿಯಲ್ಲಿ ಲೀನವಾಗಿಬಿದುತ್ತಾಳೆ. 

ಭಾನುವಾರ, ಜನವರಿ 15, 2012

ಶ್ರೀಗಣೇಶಾಯನಮಃ

ವಿಘ್ನನಿವಾರಕ ಗಣೇಶ


ಎಲ್ಲರಿಗೂ ಗೊತ್ತು, ಯಾವುದೇ ಕೆಲಸವನ್ನು ಆರಂಭಿಸುವುದಕ್ಕಿಂತ ಮುಂಚೆ ಶ್ರೀ ಗಣೇಶನನ್ನು ಸ್ತುತಿಸಿಯೇ ಮುಂದುವರಿಯಬೇಕೆಂದು.ಯಾಕೆಂದರೆ ಗಣೇಶ ಆಕಾಶ ತತ್ವಾಭಿಮಾನಿ. ಅವನು ನಮ್ಮ ಮತ್ತು ಜಗತ್ತಿನ ನಿಯಾಮಕನ ನಡುವಿನ ಕೊಂಡಿಯಿದ್ದಂತೆ. ನಾವು ಮಾಡಿದ ಒಳ್ಳೆಯ ಕೆಲಸಗಳನ್ನು ಒಯ್ದು ದೇವರಿಗೆ ತಲುಪಿಸುವವನೆ ಶ್ರೀ ಗಣೇಶ. ಹೀಗಾಗಿಯೇ ಗಣೇಶನಿಗೆ ಪ್ರಥಮ ವಂದನೆ. ಅನೇಕ ಹೆಸರುಗಳಿಂದ ಪ್ರಸಿದ್ಧನಾಗಿರುವ ಗಣೇಶನನ್ನು ಎಲ್ಲ ಜಾತಿಯ ಜನರೂ ಪುಉಜಿಸುವುದು ಒಂದು ವಿಶೇಷ.

     ಗಣೇಶನ ಆಕಾರವೋ ಅತಿಶಯ ವೈಚಿತ್ರ್ಯವುಳ್ಳದ್ದು  ಆದ್ದರಿಂದಲೇ ಗಣೇಶ ಮಕ್ಕಳಿಗೂ ಅತಿ ಪ್ರಿಯನಾದ ದೇವರು. ಭಾದ್ರಪದ ಶುಕ್ಲ ಚತುರ್ಥಿ ಗಣೇಶನ ಹುಟ್ಟುಹಬ್ಬ.ಅಂದು ಎಲ್ಲರಿಗೂ ಸಂಭ್ರಮ. ಅಂದು  ಮಣ್ಣಿನ ಗಣಪನನ್ನು ತಂದು ಪೂಜಿಸುವುದು ಸಂಪ್ರದಾಯ. 
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ 
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಶು ಸರ್ವದಾ

ಮಣ್ಣಿನಿಂದ ತಯಾರಿಸಿದ ಮಗುವಿಗೆ ಪ್ರಾಣಪ್ರತಿಷ್ಠೆ
ಮಾಡಿ ಮನೆಯನ್ನು ಕಾಯುವ ದೊಡ್ಡ ಜವಾಬ್ದಾರಿಯನ್ನು
  ಮಗು ಗಣೇಶನಿಗೆ ವಹಿಸುತ್ತಿರುವ ತಾಯಿ 
ಪಾರ್ವತಿ   
     ಗಣೇಶನ ಬಗ್ಗೆ ಅನೇಕ ಕಥೆಗಳಿವೆ. ಅವುಗಳಲ್ಲೆಲ್ಲ ಅತ್ಯಂತ ಪ್ರಸಿದ್ಧವಾದದ್ದೆಂದರೆ ಪಾರ್ವತಿ ತನ್ನ ಮೈಯ ಮಣ್ಣಿನಿಂದ ಸುಂದರವಾದ ಗೊಂಬೆಯೊಂದನ್ನು ಮಾಡಿದ ಕಥೆ. ಒಂದು ದಿನ ಪಾರ್ವತಿ ಸ್ನಾನಕ್ಕೆ ಹೋಗಬೇಕಿತ್ತು. ಮನೆಯಲ್ಲಿ ಯಾರೂ ಇಲ್ಲ. ಅದು ಮೊದಲೇ ಪರಶಿವನ ಮನೆ. ಬರಹೋಗುವ ಭಕ್ತರ ಸಂಖ್ಯೆ ಅಪಾರ. ವಿಶ್ವಾಸಿಕರೊಬ್ಬರು ಬಂದವರಿಗೆಲ್ಲ ಉತ್ತರ ಹೇಳಬೇಕು. ತನ್ನ ಮೈಯ ಮಣ್ಣಿನಿಂದಲೇ ಗೊಂಬೇಯೊಂದನ್ನು ಮಾಡಿ ಅದಕ್ಕೆ ಪ್ರಾಣ ಪ್ರತಿಷ್ಠೆ ಮಾಡುತ್ತಾಳೆ. ಅದಕ್ಕೆ ಗಣೇಶನೆಂದು ಕರೆಯುತ್ತಾಳೆ.  ಅದು ಜಗಜ್ಜನನಿ ಪಾರ್ವತಿ ಸೃಷ್ಟಿಸಿದ ಮಗು. ಸ್ವಾಭಾವಿಕವಾಗಿಯೇ ಅತಿ ಸುಂದರವಾಗಿರುತ್ತದೆ. ಮಗು ತಾಯಿಗೆ ಅತಿ ವಿಧೆಯವಾಗಿರುತ್ತದೆ ಕೂಡಾ. ಪಾರ್ವತಿ ತನ್ನ ಮನೆಯ  ಜವಾಬ್ದಾರಿಯನ್ನು ಪುಟ್ಟ ಮಗುವಿಗೆ ವಹಿಸಿ ನಿರಾತಂಕವಾಗಿ ಸ್ನಾನಕ್ಕೆ ತೆರಳುತ್ತಾಳೆ. 
     ಅವಳು ಹೋದ ಕೂಡಲೇ ಇತ್ತ ಪರಶಿವ ತನ್ನ ಮನೆಗೆ ಬರುತ್ತಾನೆ. ಮಗು ಗಣೇಶ ಶಿವನನ್ನು ಒಳಹೋಗಲು ಬಿಡುವುದಿಲ್ಲ. ಶಿವ ಕೋಪಿಸಿಕೊಳ್ಳುತ್ತಾನೆ  ಆದರೆ ಪ್ರಯೋಜನವಾಗುವುದಿಲ್ಲ. ಮಗು ಗಣೇಶ ತಾಯಿಯ ಆಜ್ಞಾಧಾರಕನಾಗಿರುತ್ತಾನೆ. ಆದರೆ ಶಿವನೋ ಪ್ರಳಯಾಂತಕನಾಗಿಬಿಡುತ್ತಾನೆ. ಆದರೆ ಪುಟ್ಟ ಗಣೇಶ ಹೆದರುವುದಿಲ್ಲ. ಶಿವನನ್ನು ಮನೆಯೊಳಗೆ ಹೋಗಲು 
ಬಿಡುವುದೇ ಇಲ್ಲ.  ಕೋಪಗೊಂಡ ಶಿವ ಬಾಲಕನ ತಲೆಯನ್ನು ಕಡಿಯಲು ಆಜ್ಞಾಪಿಸುತ್ತಾನೆ. ಬಾಲಕನ ಶಿರ ದೇಹದಿಂದ  ಬೇರ್ಪಡುತ್ತದೆ. ಶಿವ ಮನೆಯೊಳಗೆ ನಡೆಯುತ್ತಾನೆ.
ಬಾಲಕ ಗಣೇಶ ಕೈಯಲ್ಲಿ ಗದೆ ಹಿಡಿದು ತಾಯಿಯ
ಆಜ್ಞೆಯಂತೆ ಮನೆಯ ಬಾಗಿಲು ಕಾಯುತ್ತಿರುವುದು
 
ಸಿಟ್ಟಿನಿಂದ ಆರ್ಭಟಿಸುತ್ತಿರುವ ಶಿವ 
     ರುಂಡವಿಲ್ಲದೇ ಬಿದ್ದುಕೊಂಡ ಮಗುವನ್ನು ನೋಡಿದ ಪಾರ್ವತಿಯ ಎದೆಯೂಡೆಯುತ್ತದೆ. ಆರ್ದ್ರವವಾಗಿ ಪ್ರಲಾಪಿಸತೊದಗುತ್ತಾಳೆ. ಶಿವನಿಗೆ ಎಲ್ಲವೂ ಅರ್ಥವಾಗಿ ಪಾರ್ವತಿಯನ್ನು ಸಂತೈಸತೊದಗುತಾನೆ. ಆದರೆ ಮಗುವನ್ನು ಕಳೆದುಕೊಂಡ ಪಾರ್ವತಿಯ ಶೋಕ ಇನ್ನೂ ಹೆಚ್ಚುತ್ತದೆ. ಮಗುವನ್ನು ಪುನಃ ಜೀವನ್ತಗೊಲಿಸುವುದಾಗಿ ಮಾತು ಕೊಟ್ಟ ನಂತರ ಪಾರ್ವತಿ ಸಮಾಧಾನ ಹೊಂದುತ್ತಾಳೆ. ಮಗುವಿನ ದೇಹಕ್ಕೆ ರುಂಡ ಜೋಡಿಸಿ ಪುನರುಜ್ಜೀವನಗೊಳಿಸಲು ಶಿವ ತನ್ನ ಗಣಗಳಿಗೆ ಆಜ್ಞಾಪಿಸುತ್ತಾನೆ. ಆದರೆ ಕಡಿದುಹೋದ ರುಂಡವು ದೊರಕಲೋಲ್ಲದಾಗಿದೆ. ಗಣಗಳಿಗೆ ಏನು ಮಾಡಬೇಕೆಂದು ತಿಳಿಯಲೊಲ್ಲದಾಗಿದೆ. ವಿಷಯವನ್ನು ಶಿವನಿಗೆ ಅರಿಕೆ ಮಾಡಿಕೊಳ್ಳುತ್ತಾರೆ. ಆಗ ಶಿವನು ಪರಿಹಾರವೊಂದನ್ನು ಸೂಚಿಸುತ್ತಾನೆ. ಸಮೀಪದಲ್ಲಿ ಯಾವುದೇ ಪ್ರಾಣಿಯು ಉತ್ತರ ದಿಕ್ಕಿಗೆ ತಲೆ ಮಾಡಿ ಸತ್ತು ಬಿದ್ದಿದ್ದರೂ ಅದರ ತಲೆಯನ್ನು ತಂದು ಮಗುವಿಗೆ ಜೋಡಿಸಲು ತನ್ನ ಗಣಗಳಿಗೆ ಆಜ್ಞಾಪಿಸುತ್ತಾನೆ. 
     ಹತ್ತಿರದಲ್ಲಿಯೇ ಆನೆಯೊಂದು ಸತ್ತು ಬಿದ್ದಿರುತ್ತದೆ. ಅದರ ರುಂಡವನ್ನು ಕಡಿದುಕೊಂಡು ಬಂದು ಮಗುವಿನ ಶರೀರಕ್ಕೆ ಜೋಡಿಸುತ್ತಾರೆ. ಮಗು ಎದ್ದು ಕುಳಿತುಕೊಳ್ಳುತ್ತದೆ. ತನ್ನ ಮಗು ಬದುಕಿರುವುದನ್ನು ಕಂಡ ಪಾರ್ವತಿ ಹರ್ಷಭರಿತಳಾಗುತ್ತಾಳೆ. ಹೀಗೆ ಶಿವನ ಕಾರುಣ್ಯದಿಂದ ಗಣೇಶನಿಗೆ ಮತ್ತೊಮ್ಮೆ ಜೀವ ದೊರೆಯುತ್ತದೆ. ಅವನು ಶಿವ-ಪಾರ್ವತಿಯರ ಅಚ್ಚು ಮೆಚ್ಚಿನ ಮಗನಾಗಿ ವಿದ್ಯಾ ಬುದ್ಧಿಗಳಿಗೆ ಅಧಿದೇವನಾಗುತ್ತಾನೆ.