ವಿಚಿತ್ರ ರೂಪದ ಜಗನ್ನಾಥ
(ಮುಂದುವರೆದಿದ್ದು)
ತಾನು ನೀಲಮಾಧವನಿಗಾಗಿ ಕಟ್ಟಿಸಿದ ದೇವಸ್ಥಾನದಲ್ಲಿ ಪ್ರತಿಷ್ಥಾಪಿಸುವ ಸಲುವಾಗಿ ಸಮುದ್ರದಲ್ಲಿ ದೊರಕಿದ ಮರದ ದಿವ್ಯವಾದ ದಿಮ್ಮೆಗಳಿಂದ ಮೂರ್ತಿಗಳನ್ನು ಮಾಡಿಸಬೇಕೆಂದು ಆಲೋಚಿಸಿ ತನ್ನ ಬಡಗಿಗಳನ್ನು ಕರೆಸಿ ಅವರಿಗೆ ಜವಾಬ್ದಾರಿಯನ್ನು ಒಪ್ಪಿಸಿದನು. ಆದರೆ ತಿಂಗಳುಗಳಾದರೂ ಅವನ ಬದಗಿಗಳಿಂದ ಮರದ ದಿಮ್ಮೆಗಳ ಒಂದು ಚೂರನ್ನೂ ಕತ್ತರಿಸಲಾಗಲಿಲ್ಲ. ರಾಜ ಹತಾಶೆಯಿಂದ ದಿಕ್ಕು ತೋಚದಂತಾಗುತ್ತಾನೆ. ಮರದ ದಿಮ್ಮೆಗಳಿಂದ ಮೂರ್ತಿಗಳನ್ನು ತಯಾರಿಸಿಕೊಟ್ಟವರಿಗೆ ತನ್ನ ಅರ್ಧ ರಾಜ್ಯವನ್ನೇ ಕೊಡುತ್ತೇನೆಂದು ಡಂಗುರ ಹೊಡೆಸುತ್ತಾನೆ. ರಾಜ್ಯದ ಆಸೆಯಿಂದ ಅನೇಕರು ಬಂದು ಪ್ರಯತ್ನಿಸುತ್ತಾರೆ. ಆದರೆ ಯಾರಿಂದಲೂ ಕಟ್ಟಿಗೆಯನ್ನು ಒಂದು ಚೂರನ್ನು ಕತ್ತರಿಸಲೂ ಸಾಧ್ಯವಾಗುವುದಿಲ್ಲ.
![]() |
| ಬಲರಾಮ-ಸುಭದ್ರೆ-ಜಗನ್ನಾಥ |
![]() |
| ಜಗನ್ನಾಥ ಪುರಿಯಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಏಕಕಾಲಕ್ಕೆ ಎಳೆಯುತ್ತಿರುವ ಮೂರು ರಥಗಳು |
ಪ್ರತಿ ಹನ್ನೆರಡು ವರ್ಷಗಳಿಗೆ ಒಂದು ಸಲ ಈ ಕಟ್ಟಿಗೆಯ ಮೂರ್ತಿಗಳನ್ನು ಬದಲಾಯಿಸಲಾಗುತ್ತದೆ. ಹನ್ನೆರಡು ವರ್ಷಗಳ ನಂತರ ಹಳೆಯ ಮೂರ್ತಿಗಳ ದೈವತ್ವ ನಾಶವಾಗುತ್ತದೆಂಬ ನಂಬಿಕೆ ಇದೆ. ಆದ್ದರಿಂದ ಅವುಗಳನ್ನು ಸಂಸ್ಕಾರ ಮಾಡುತ್ತಾರೆ. ಆಶ್ಚರ್ಯವೆಂದರೆ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಸಮುದ್ರದಲ್ಲಿ ತೇಲಿಬರುವ ಕಟ್ಟಿಗೆಯ ದಿಮ್ಮಿಗಳಿಂದಲೇ ಹೊಸ ಮೂರ್ತಿಗಳನ್ನು ನಿರ್ಮಿಸಲಾಗುತ್ತದೆ. ಮನುಷ್ಯನಿಗಿರುವಂತೆ ದೈವಕ್ಕೂ ಹುಟ್ಟು ಸಾವುಗಳನ್ನು ಇಲ್ಲಿ ಮಾಡಲಾಗಿದೆ. ಜಗತ್ತಿನಲ್ಲಿ ಯಾವುದೂ ಪರಿಪೂರ್ಣವಲ್ಲ, ಯಾವುದೂ ಶಾಶ್ವತವಲ್ಲವೆಂಬ ತತ್ವವನ್ನು ಪ್ರಚುರಪಡಿಸಲು ಬಹುಶಃ ಇಂಥ ಸಂಪ್ರದಾಯವನ್ನು ಪೋಷಿಸಿಕೊಂಡು ಬರಲಾಗಿದೆಯೇನೋ?
ಇಲ್ಲಿ ಶ್ರೀ ಕೃಷ್ಣನನ್ನು ಜಗನ್ನಾಥನೆಂದು ಕರೆಯಲಾಗುತ್ತದೆ. ಆದರೆ ಅವನಿಗೆ ಕೈಗಳಿಲ್ಲ, ಕಾಲುಗಳಿಲ್ಲ, ಕಿವಿಗಳಿಲ್ಲ, ಕಣ್ಣುಗಳಿಗೆ ರೆಪ್ಪೆಗಳಿಲ್ಲ. ಆದರೆ ದುಂಡು ಬಟ್ಟಲು ಕಣ್ಣುಗಳು ಹಾಗೂ ಮುಖದಲ್ಲಿರುವ ಮಂದಸ್ಮಿತ ಜಗತ್ತಿನಲ್ಲಿರುವ ಭಕ್ತರನ್ನೆಲ್ಲ ತನ್ನೆಡೆಗೆ ಆಕರ್ಷಿಸಿ ಸೆಳೆದುಕೊಳ್ಳುತ್ತದೆ.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ