ಸೋಮವಾರ, ಫೆಬ್ರವರಿ 13, 2012

ಶಿವರಾತ್ರಿಯಂದು ಜಾಗರಣೆ ಏಕೆ?

ನಂಜನುಂಡ ದೇವ ಮಹಾದೇವ 


   ಶಿವರಾತ್ರಿಯಂದು ಮಾಡುವ ಉಪವಾಸ ಹಾಗೂ ಜಾಗರಣೆಗಳು ಶಿವನಿಗೆ ಬಹಳ ಪ್ರಿಯವಾದುದೆಂಬ ಭಾವನೆಯಿದೆ. ಅದ್ದರಿಂದ ಇಡೀ ದೇಶವು ಶಿವರಾತ್ರಿಯನ್ನು ಬಹಳ ಶ್ರದ್ಧೆಯಿಂದ ಆಚರಿಸುತ್ತದೆ. ಗುಡಿಗಳಲ್ಲಿ ಬೆಳಗಿನವರೆಗೂ ಭಜನೆಗಳನ್ನು ಏರ್ಪಡಿಸುತ್ತಾರೆ. ಧ್ವನಿವರ್ಧಕಗಳಲ್ಲಿ ರಾತ್ರಿಯಿಡೀ ಜೋರಾಗಿ ಹಾಡು ಹಾಡುತ್ತಾರೆ. ಇಡೀ ರಾತ್ರಿ ಶಿವಲಿಂಗಗಳಿಗೆ ಅಭಿಷೇಕ ಗಳಾಗುತ್ತಲೇ ಇರುತ್ತವೆ. ರಾತ್ರಿಯೆಲ್ಲ ಟಿ.ವಿ.ಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾರೆ. ಉದ್ದೇಶವೆಂದರೆ ಶಿವರಾತ್ರಿಯಂದು ನಿದ್ದೆ ಮಾಡದೆ ಎಲ್ಲರೂ ಎಚ್ಚರವಾಗಿರಲಿ ಎಂದು. ಏಕೆ? ಪ್ರಸಂಗವನ್ನು ವಿಮರ್ಶಿಸೋಣ.

   ಶಿವ ನೃತ್ಯಪ್ರಿಯ. ಅವನ ತಾಂಡವಕ್ಕೆ ಇಡೀ ಜಗತ್ತು ತಲ್ಲಣಗೊಳ್ಳುತ್ತದೆ. ಅವನು ಸ್ಮಶಾನವಾಸಿ. ಮೈಮೇಲೆಲ್ಲ ಭಸ್ಮ ಬಳಿದುಕೊಂಡಿರುತ್ತಾನೆ. ಕೊರಳಲ್ಲೊಂದು ಹಾವು. ಕೈಯಲ್ಲಿ ಡಮರುಗ. ತಲೆಯಮೇಲೆ ಚಂದ್ರನ ಚೂರು, ಅದು ಅವನ ಆಭರಣ. ಜಟೆಯಿಂದ ಒಂದೆ ಸವನೆ ಭೂಮಿಗೆ ಚೆಲ್ಲುತ್ತಿರುವ ಗಂಗೆ, ಅವನ ಎರಡನೆಯ ಹೆಂಡತಿ,  ತಲೆಯೇರಿ ಕುಳಿತಿದ್ದಾಳೆ. ಅವನು ಉಟ್ಟುಕೊಂಡಿರುವುದು  ಆನೆಯ ಚರ್ಮ. ಹಣೆಯ ಮಧ್ಯದಲ್ಲೊಂದು ಬೆಂಕಿಯಂತಹ ಕಣ್ಣು. ತೊಡೆಯ ಮೇಲೊಬ್ಬಳು ಹೆಂಡತಿ, ಅವಳು ಗೌರಿ.

  ಹೀಗೆ ಪರಶಿವನ ಸಂಸಾರ, ರೂಪ, ಅಲಂಕಾರಗಳೆಲ್ಲ ಬಹಳ ವೈಚಿತ್ರ್ಯಗಳಿಂದ ಕೂಡಿವೆ. ಅವನ ಮೂರನೆಯ ಕಣ್ಣು ಬಹಳ ವಿಲಕ್ಷಣವಾಗಿದ್ದು ವಿಶೇಷವಾಗಿದೆ. ಆದ್ದರಿಂದಲೇ ಅವನು ವಿರೂಪಾಕ್ಷನೆಂದು ಕರೆಸಿಕೊಳ್ಳುತ್ತಾನೆ. ಶಿವನು ಭಕ್ತಪ್ರಿಯ. ಅವನು ತನ್ನ ಭಕ್ತರಿಗೆ ಬಹು ಬೇಗನೆ  ಒಲಿಯುತ್ತಾನೆ. ಆದ್ದರಿಂದ ಶಿವ ಎಲ್ಲ ವರ್ಗದ ಜನರಿಗೆ ಆರಾಧ್ಯ ದೈವವಾಗಿದ್ದಾನೆ.

   ಸಮುದ್ರಮಥನವು ಅಮೃತವನ್ನು ಪಡೆಯುವುದಕ್ಕಾಗಿ ನಡೆದ ಮಹಾಪ್ರಸಂಗ. ದೇವ ದಾನವರು ಒಟ್ಟಾಗಿ ಸಮುದ್ರವನ್ನು ಕಡೆದಾಗ ಮೊಟ್ಟಮೊದಲು ಬಂದದ್ದೇ ಹಾಲಾಹಲ. ಅದು ಕಾಳಕೂಟ ವಿಷ. ಅದರ ಒಂದು ಹನಿ ಭೂಮಿಗೆ ತಾಗಿದರೂ ಸರ್ವನಾಶ ತಪ್ಪುತ್ತಿರಲಿಲ್ಲ. ಅದನ್ನು ಎಲ್ಲಿಯೂ ಚೆಲ್ಲುವಂತಿಲ್ಲ. ಕೇವಲ ಅದರ ಜ್ವಾಲೆಗಳಿಂದಲೇ ಸಕಲ ಜೀವಿಗಳೂ ನಾಶವಾಗುವಷ್ಟು ಹಾನಿಕಾರಕವಾಗಿತ್ತು ಆ ವಿಷ. ಗಳಿಗೆ ಗಳಿಗೆಗೂ ಹಾಲಾಹಲದ ಜ್ವಾಲೆಗಳು ವ್ಯಾಪಿಸಿ ಅದರಿಂದ ದುಷ್ಟ ಪ್ರಭೆಯು ಏಳಲು ಪ್ರಾರಂಭಿಸಿದವು. ದೇವತೆಗಳು ಆತಂಕಕ್ಕೆ ಒಳಗಾಗತೊದಗಿದರು. ಆದರೆ ದೈತ್ಯರು ಸ್ವಾರ್ಥಿಗಳು. ಅವರು ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸದಲ್ಲಿಯೇ ಮಗ್ನರಾಗಿದ್ದರು. ದೇವತೆಗಳು ಸಕಲರಿಗೂ ಲೇಸನ್ನೇ ಬಯಸುವವರು. ಹಾಲಾಹಲದಿಂದ ಉಂಟಾಗಬಹುದಾದ ಹಾನಿಯನ್ನು ಪರಿಹರಿಸಲು ಪರಶಿವನೇ ಸಮರ್ಥನು ಎಂದುಕೊಂಡು ಅವನಿಗೆ  ಮೊರೆ ಹೋದರು.

   ತನ್ನನ್ನು ನಂಬಿಕೊಂಡು ಬಂದ ದೇವತೆಗಳನ್ನು ಶಿವನು ನಿರಾಸೆಗೊಳಿಸಲಿಲ್ಲ. ಅವರಿಗೆ ಅಭಯವನ್ನು ನೀಡಿ ಘೋರವಾದ ಕಾಳಕೂಟ ವಿಷವನ್ನು ತಾನು ಭರಿಸುವುದಾಗಿ ಹೇಳಿ ಅವರನ್ನು ಕಳುಹಿಸಿದ. ಜಗತ್ತನ್ನು ಸಂರಕ್ಷಿಸುವ ಸಲುವಾಗಿ ವಿಷದ ಎಲ್ಲ ನಂಜನ್ನು ತಾನೇ ಕುಡಿದುಬಿಡಲು ಶಿವನು ನಿರ್ಧರಿಸಿದ್ದ. ಹೀಗೆ ಜಗತ್ತನ್ನು ಆವರಿಸಲಿದ್ದ ವಿಷವನ್ನೆಲ್ಲ ಕುಡಿದ ಶಿವನಿಗೆ ವಿಷದ ನಂಜು ಅವನ ದೇಹಕ್ಕೆ ಹಾನಿ ಮಾಡಬಾರದೆಂದು ವಿಷವು ಗಂಟಲಿನಿಂದ ಕೆಳಗಿಳಿಯದಂತೆ ನಿಗ್ರಹಿಸಿಬಿಟ್ಟಳು. ಗಂಟಲಲ್ಲೇ ಉಳಿದ ವಿಷದ ಪ್ರಭಾವದಿಂದ ಶಿವನ ಕುತ್ತಿಗೆಯು ನೀಲಿ ಬಣ್ಣದಿಂದ ಆವೃತವಾಯಿತು. ಶಿವಭಕ್ತರೆಲ್ಲ ಏನು ಮಾಡುವುದೆಂದು ದಿಕ್ಕು ತೋಚದಾಯಿತು.

   ಭಕ್ತರ ಭಾವನೆಯೇ ಹಾಗೆ. ಪರಮಾತ್ಮನನ್ನೂ ಅವರು ತಮ್ಮಂತೆಯೇ ಭಾವಿಸುತ್ತಾರೆ. ವಿಷವು ತಮಗೆ ತೊಂದರೆ ನೀಡುವಂತೆ ದೇವರಿಗೂ ಹಾನಿ ಮಾಡಬಹುದೇನೋ ಎಂಬ ಅಳುಕು ಭಕ್ತರದು. ಪರಶಿವನ ಕುತ್ತಿಗೆ ನೀಲಿಯಾದ ತಕ್ಷಣ ಭಕ್ತರು ವಿವಂಚನೆಗೊಳಗಾಗತೊಡಗಿದರು. ಹಳ್ಳಿಗಳಲ್ಲಿ ಹಾವು ಕಚ್ಚಿ ವಿಷವೆರಿದಾಗ ಮಾಡುವುದೇನು? ಸುತ್ತಲೂ ಕುಳಿತು ಭಜನೆ ಮಾಡುತ್ತಾ ಹಾವು ಕಚ್ಚಿಸಿಕೊಂಡವನು  ನಿದ್ಫ್ರೆ ಮಾಡದಂತೆ ಜಾಗರಣೆ ಮಾಡುವುದು, ಜಾಗರಣೆ ಮಾಡಿಸುವುದು. ಹೀಗೆ ಶಿವನಿಗೆ ವಿಷದಿಂದ ಹಾನಿಯಾಗದಂತೆ ಕಾಪಾಡಲು ಜಾಗರಣೆ ಮಾಡುವ ಸಂಪ್ರದಾಯ ಬೆಳೆದು ಬಂತು. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಯಾರಾದರೂ ಊಟ ಮಾಡುವುದುಂಟೆ? ಹಾಗೆಯೇ ಬೆಳೆದು ಬಂದದ್ದು ಶಿವರಾತ್ರಿ ಉಪವಾಸ ಹಾಗೂ ಜಾಗರಣೆ. 








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ