ವಿಚಿತ್ರರೂಪದ ಪುರಿ ಜಗನ್ನಾಥ
ಭಾಗ-೧
ಒರಿಸ್ಸಾದಲ್ಲಿರುವ ಜಗನ್ನಾಥ ಪುರಿ ಯಾರಿಗೆ ಗೊತ್ತಿಲ್ಲ? ಅಲ್ಲಿಯ ಬೃಹತ್ ಜಗನ್ನಾಥ ದೇವಾಲಯದಲ್ಲಿನ, ನೀಲವರ್ಣದ ಶ್ರೀಕೃಷ್ಣನ ಮೂರ್ತಿ, ಬೆಳ್ಳಂಬೆಳಗುವ ಬಲರಾಮ, ಅರಿಷಿಣ ಛಾಯೆಯ ಸುಭದ್ರೆಯ ಮೂರ್ತಿಗಳನ್ನು ದೊಡ್ಡ ರಥಗಳಲ್ಲಿ ಕೂಡಿಸಿ ಮೆರವಣಿಗೆ ಮಾಡುವುದನ್ನು ನೋಡಲು ಲಕ್ಷಾಂತರ ಜನ ಸೇರುತ್ತಾರೆ. ವಿಚಿತ್ರವೆಂದರೆ ಮೂರ್ತಿಗಳು ಯಾವುದೋ ಬುಡಕಟ್ಟು ಜನರು ನಿರ್ಮಿಸಿದ ಅರ್ಧಂಬರ್ಧ ಕಟ್ಟಿಗೆಯ ತುಣುಕುಗಳಂತೆ ಕಾಣುತ್ತವೆ. ಹೀಗೇಕೆ? ಎಂದು ಕೇಳಿದರೆ ಅದಕ್ಕೊಂದು ಸುಂದರ ಕಥೆಯಿದೆ.
ಆಗ ಒರಿಸ್ಸಾದ ಮಹಾರಾಜ ಇಂದ್ರದ್ಯುಮ್ನ, ಶ್ರೀಕೃಷ್ಣನ ಪರಮಭಕ್ತ. ವಿಷಯವನ್ನೆಲ್ಲ ತಿಳಿದುಕೊಂಡ ಇಂದ್ರದ್ಯುಮ್ನ ನೀಲಮಾಧವನ ಮೂರ್ತಿಯನ್ನು ತನ್ನ ರಾಜಧಾನಿಗೆ ತಂದು ಪ್ರತಿಸ್ಥಾಪಿಸುವ ಸಲುವಾಗಿ ಭವ್ಯ ದೇವಾಲಯವೊಂದನ್ನು ಕಟ್ಟಿಸುತ್ತಾನೆ. ನೀಲಮಾಧವನ ಮೂರ್ತಿಯನ್ನು ಕೊಡಲು ಬುಡಕಟ್ಟು ಜನರನ್ನು ಕೇಳಿಕೊಳ್ಳುತ್ತಾನೆ. ಆದರೆ ಬುಡಕಟ್ಟು ಜನರು ನೀಲಮಾಧವನನ್ನು ತಮ್ಮ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುತ್ತಿರುತ್ತಾರೆ. ಎಷ್ಟೇ ಪ್ರಯತ್ನಿಸಿದರೂ ಬುಡಕಟ್ಟು ಜನರು ಅದನ್ನು ಕೊಡಲೊಪ್ಪುವುದಿಲ್ಲ. ಹತಾಶನಾದ ಇಂದ್ರದ್ಯುಮ್ನನು ನೀಲಮಾಧವನ ಮೂರ್ತಿಯನ್ನು ತರುವ ಜವಾಬ್ದಾರಿಯನ್ನು ತನ್ನ ಆಸ್ಥಾನದ ಯುವ ಮುತ್ಸದ್ದಿ ವಿದ್ಯಾಪತಿಗೆ ಒಪ್ಪಿಸುತ್ತಾನೆ.
ವಿದ್ಯಾಪತಿ ಬಹಳ ಚತುರ ಹಾಗೂ ಸುಂದರ ಯುವಕ. ತನ್ನ ರಾಜ ಹೇಳಿದ ಕೆಲಸವನ್ನು ಮಾಡಲು ಹಂಚಿಕೆಯೊಂದನ್ನು ಮಾಡುತ್ತಾನೆ. ಅವನು ಬುಡಕಟ್ಟು ಜನರ ಗುಡಿಸಲುಗಳಲ್ಲಿ ಮಾರುವೇಷದಿಂದ ಇರತೊಡಗುತ್ತಾನೆ. ಬುಡಕಟ್ಟು ಜನರ ನಾಯಕ ವಿಸ್ವವಸು. ಅವನಿಗೆ ಲಲಿತೆಯೆಂಬ ಸುಂದರ, ಸುಶೀಲ ಮಗಳಿರುತ್ತಾಳೆ. ವಿಶ್ವವಸು ತನ್ನ ಮಗಳನ್ನು ಬಹಳ ಪ್ರೀತಿಸುತ್ತಿರುತ್ತಾನೆ. ಈ ವಿಷಯವನ್ನು ಅರಿತ ವಿದ್ಯಾಪತಿಯು ಸ್ವಲ್ಪ ಸಮಯದಲ್ಲೇ ಲಲಿತೆಯ ಮನಸ್ಸನ್ನು ಗೆದ್ದುಕೊಳ್ಳುತ್ತಾನೆ. ವಿಷಯವು ವಿಶ್ವವಸುವಿಗೆ ಗೊತ್ತಾಗಿ ವಿದ್ಯಾಪತಿಗೆ ತನ್ನ ಮಗಳನ್ನು ಕೊಟ್ಟು ಮಾಡುವೆ ಮಾಡಲು ಅವನು ನಿರ್ಧರಿಸುತ್ತಾನೆ. ಆದರೆ ಜಾಣ ವಿದ್ಯಾಪತಿ ತನಗೆ ನೀಲಮಾಧವನ ದರ್ಶನ ಮಾಡಿಸಿದರೆ ಮಾತ್ರ ತಾನು ಲಲಿತೆಯನ್ನು ಮಾಡುವೆ ಮಾಡಿಕೊಳ್ಳುತ್ತೇನೆಂದು ಹೇಳುತ್ತಾನೆ. ಮನಸ್ಸಿಲ್ಲದಿದ್ದರೂ ಮಗಳ ಮೇಲಿನ ಮಮತೆಯಿಂದ ನೀಲಮಾಧವನ ದರ್ಶನ ಮಾಡಿಸುತ್ತೇನೆ ಆದರೆ ದಾರಿ ಗೊತ್ತಾಗದಂತೆ ಎರಡೂ ಕಣ್ಣುಗಳನ್ನು ಭದ್ರವಾಗಿ ಕಟ್ಟಿ ದಾರಿ ತಿಳಿಯದಂತೆ ಕರೆದುಕೊಂಡು ಹೋಗುತ್ತೇನೆ ಎಂದಾಗ ವಿದ್ಯಾಪತಿಯು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗುತ್ತದೆ.
![]() |
| ಬುಡಕಟ್ಟು ಜನರ ಗುಹಯಿದ್ದ ಸ್ಥಳ ಒರಿಸ್ಸಾದ ನಯಾಘರ್ ಜಿಲ್ಹೆಯ ಕಾಂತಿಲೋದಲ್ಲಿ ಈಗ ಇರುವ ನೀಲಮಾಧವ ದೇವಸ್ಥಾನ |
ಮಳೆಗಾಲ ಬಂದಾದ ಮೇಲೆ ವಿದ್ಯಾಪತಿಯು ಚೆಲ್ಲಿದ್ದ ಸಾಸಿವೆ ಕಾಲುಗಳು ಸಸಿಗಳಾಗಿ ಬೆಳೆದು ಹಳದಿ ಹೂವುಗಳು ಸಾಲುಸಾಲಾಗಿ ನೀಲಮಾಧವನ ಗುಹೆಯವರೆಗೂ ಬೆಳೆದು ನಿಂತಿರುತ್ತವೆ. ವಿದ್ಯಾಪತಿಗೆ ದಾರಿ ಸ್ಪಷ್ಟವಾಗಿ ಗೋಚರಿಸುತ್ತದೆ. ವಿಷಯವನ್ನು ತನ್ನ ರಾಜ ಇಂದ್ರದ್ಯುಮ್ನನಿಗೆ ತಿಳಿಸುತ್ತಾನೆ. ನೀಲಮಾಧವನನ್ನು ವಶಪಡಿಸಿಕೊಳ್ಳಲು ಕಾತುರತೆಯಿಂದ ಕಾಯುತ್ತಿದ್ದ ಇಂದ್ರದ್ಯುಮ್ನ ದೊಡ್ಡ ಸೈನ್ಯದೊಂದಿಗೆ ಬುಡಕಟ್ಟು ಜನರ ಮೇಲೇರಿ ಬರುತ್ತಾನೆ. ಬುಡಕಟ್ಟು ಜನರೆಲ್ಲಾ ಒಟ್ಟಾಗಿ ರಾಜನಿಗೆ ಮನವಿ ಮಾಡಿಕೊಂಡು ನೀಲಮಾಧವನನ್ನು ಇಲ್ಲಿಯೇ ಇರಗೊಡಲು ಪ್ರಾರ್ಥಿಸುತ್ತಾರೆ. ಅಷ್ಟರಲ್ಲಿ ಲಲಿತೆಯ ನಿಷ್ಕಳಂಕ ಪ್ರ್ರೀತಿಯಿಂದಾಗಿ ವಿದ್ಯಾಪತಿಯ ಮನಸ್ಸೂ ಪರಿವರ್ತನೆಯಾಗಿರುತ್ತದೆ. ಅವನೂ ಇಂದ್ರದ್ಯುಮ್ನನನ್ನು ಪರಿಪರಿಯಾಗಿ ಪ್ರಾರ್ಥಿಸುತ್ತಾನೆ. ಆದರೆ ದುರಹಂಕಾರಿಯಾದ ರಾಜನು ಯಾರ ಮಾತನ್ನೂ ಕೇಳುವುದಿಲ್ಲ. ದುಸ್ಸಾಹಸದಿಂದ ನೀಲಮಾಧವನಿರುವ ಗುಹೆಯನ್ನು ಪ್ರವೇಶಿಸುತ್ತಾನೆ. ಆದರೆ ದೈವ ಸಂಕಲ್ಪವೇ ಬೇರೆಯಾಗಿರುತ್ತದೆ. ಅಲ್ಲಿ ನೀಲಮಾಧವನ ವಿಗ್ರಹವಿರುವುದೇ ಇಲ್ಲ. ಅದು ಅದೃಶ್ಯವಾಗಿಬಿಟ್ಟಿರುತ್ತದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ