ಅಮಾವಾಸ್ಯೆ ಎಂದರೇನು?
ಅಮಾವಾಸ್ಯೆಗೆ ಹೆದರುವ ಜನರೇ ಹೆಚ್ಚು. ಹೆದರಿಕೆಗೆ ಬಹುಶಃ ಕತ್ತಲು ಪ್ರಮುಖ ಕಾರಣವಾಗಿರಬೇಕು. ಯಾಕೆಂದರೆ ಚಂದ್ರನಿಲ್ಲದ ರಾತ್ರಿ ಗಾಢ ಕತ್ತಲು ಆವರಿಸಿರುತ್ತದೆ. ವಿದ್ಯುತ್ ಶಕ್ತಿಯ ಆವಿಷ್ಕಾರವಾಗಿರದ ಆ ದಿನಗಳಲ್ಲಿ ಚಂದ್ರನ ಬೆಳಕು ಮಾತ್ರ ರಾತ್ರಿಯ ದೀವಿಗೆಯಾಗಿರುತ್ತಿತ್ತು. ಹೀಗೆ ಚಂದ್ರನಿಲ್ಲದ ರಾತ್ರಿ ಎಂದರೆ ಅದು ಭಯಕ್ಕೆ ಕಾರಣವಾಗುತ್ತಿತ್ತು. ಆದ್ದರಿಂದಲೇ ಮಾಟ-ಮಂತ್ರಗಳು ಅಮಾವಾಸ್ಯೆಯಂದು ಹೆಚ್ಚಾಗಿ ಮಾಡಲ್ಪಡುತ್ತಿದ್ದವು. ಜನರಿಗೆ ಅಮಾವಾಸ್ಯೆಯೆಂದರೆ ಏನೋ ವಿಶೇಷವೆಂಬ ಅವ್ಯಕ್ತ ಭಯ ಪ್ರಾರಂಭವಾಗಿರಬಹುದಾಗಿದೆ.
ಹಾಗಾದರೆ ಅಮಾವಾಸ್ಯೆಗೆ ಹೆದರಬೇಕೆ? ಖಂಡಿತ ಇಲ್ಲ. ಎಲ್ಲ ದಿನಗಳಂತೆ ಅದು ಕೂಡ ಒಂದು ಖೌಗೋಳಿಕ ವಿದ್ಯಮಾನ ಅಷ್ಟೇ ಅಮಾವಾಸ್ಯೆ ಎಂಬ ಹೆಸರು ಹೇಗೆ ಬಂತು ಎನ್ನಲು ಒಂದು ಕುತೂಹಲಕರ ಮಾಹಿತಿ ಇದೆ.
ಪ್ರತಿ ತಿಂಗಳಲ್ಲಿ ಹದಿನೈದು ದಿನಗಳ ಎರಡು ಪಕ್ಷಗಳು ಇರುತ್ತವೆ. ದಿನದಿನವೂ ಚಂದ್ರನು ವೃದ್ಧಿಸುತ್ತ ಹುಣ್ಣಿಮೆಯಂದು ಪೂರ್ಣ ಪ್ರಮಾಣದಲ್ಲಿ ಕಾಣುವುದು ಶುಕ್ಲಪಕ್ಷ. ಎರಡನೆಯದು ಕೃಷ್ಣಪಕ್ಷ. ಈ ಎರಡನೆಯ ಹದಿನೈದು ದಿನಗಳಲ್ಲಿ ಚಂದ್ರನು ಕ್ಷೀಣವಾಗುತ್ತ ಹೋಗುತ್ತಾನೆ.
ಹೀಗೆ ಕ್ಷೀಣವಾಗುತ್ತ ಹೋಗುವ ಚಂದ್ರನು ಆ ತಿಂಗಳ ಕೊನೆಯ ದಿನ ಪೂರ್ತಿ ಕಾಣದಂತಾಗುತ್ತಾನೆ. ಪುರಾಣಗಳಲ್ಲಿ ಇದನ್ನು ಬಹಳ ವಿಸ್ಮಯವಾಗಿ ವರ್ಣಿಸಿದ್ದಾರೆ. ತನ್ನ ಎಲ್ಲ ತೇಜಸ್ಸನ್ನು ಕಳೆದುಕೊಂಡ ಚಂದ್ರನಲ್ಲಿ ಕೇವಲ ಎರಡೇ ಎರಡು ಕಲೆಗಳು ಉಳಿಯುತ್ತವೆ. ಆಗ ಅವನು ಸೂರ್ಯನಲ್ಲಿ ಮೊರೆಹೋಗಿ ಅಮಾ ಎಂಬ ಸೂರ್ಯ ಕಿರಣಗಳಲ್ಲಿ ಬಚ್ಚಿಟ್ಟುಕೊಳ್ಳುತ್ತಾನೆ. ಸೂರ್ಯನಿಂದ ಪಡೆದುಕೊಂಡ ಶಕ್ತಿಕಿರಣಗಳಿಂದ ಪ್ರಭಾವಶಾಲಿಯಾದ ಚಂದ್ರನು ಮತ್ತೆ ಬಾಲಚಂದ್ರನಾಗಿ, ಪೂರ್ಣಚಂದ್ರನಾಗಿ ಬೆಳಗಿ ಕೃಷ್ಣಪಕ್ಷದಲ್ಲಿ ಮತ್ತೆ ತೇಜೋಹೀನ ನಾಗತೊಡಗುತ್ತಾನೆ.
ಹೀಗೆ ಚಂದ್ರನು 'ಅಮಾ' ಎನ್ನುವ ಸೂರ್ಯ ಕಿರಣಗಳಲ್ಲಿ 'ವಾಸ'ವಾಗಿರುವ ದಿನವೇ ಅಮಾವಾಸ್ಯೆ. ಅಂದು ರಾತ್ರಿ ಸಂಪೂರ್ಣ ಕತ್ತಲೆ ಆವರಿಸಿರುತ್ತದೆ ಎಂಬುದನ್ನು ಬಿಟ್ಟರೆ ಹೆದರಲು ಬೇರೇನೂ ಕಾರಣ ಇಲ್ಲ.
