ಬುಧವಾರ, ಜನವರಿ 25, 2012

ಮರುತ ಗಣ ದೇವತೆಗಳು

ದಿತಿದೇವಿಯ ನಲವತ್ತೊಂಭತ್ತು ಮಕ್ಕಳು

     ಕಶ್ಯಪರು ಬ್ರಹ್ಮರ್ಷಿಗಳು. ಲೋಕಕಲ್ಯಾಣಕ್ಕಾಗಿ ಅವರಷ್ಟು ತ್ಯಾಗವನ್ನು ಯಾರೂ ಮಾಡಿಲ್ಲ. ಅವರು ದೇವತೆಗಳ, ದೈತ್ಯರ, ಪಕ್ಷಿ, ಪ್ರಾಣಿ, ಸರ್ಪ, ಗಿಡ-ಬಳ್ಳಿ ಮುಂತಾದ ಎಲ್ಲ ಜೀವಿಗಳ ವಂಶಕ್ಕೆ ಕಾರಣರಾಗಿದ್ದಾರೆ. ಅವರಿಗೆ ಒಟ್ಟು ಹದಿಮೂರು ಜನ ಮಡದಿಯರು. ಅದಿತಿ ಮೊದಲ ಹೆಂಡತಿ. ನಂತರ ದಿತಿ, ದನು, ಅರಿಷ್ಟಾ, ಸುರಸಾ, ಖಷಾ, ಸುರಭಿ, ವಿನುತಾ, ತಾಮ್ರಾ, ಕ್ರೋಧವಶಾ, ಇರಾ, ಕದ್ರು, ಮತ್ತು ಮುನಿ.

ದಿತಿದೇವಿಯ  ಮನೆಗೆ ಹೊರಟಿರುವ  ಇಂದ್ರದೇವ 
     ದಿತಿದೇವಿಯ ಮಕ್ಕಳೆಲ್ಲ ಹಿರಣ್ಯಾಕ್ಷ, ಹಿರಣ್ಯಕಶಿಪು, ಸಿಂಹಿಣಿ ಮೊದಲಾದ ದೈತ್ಯರು. ಅವರೆಲ್ಲಾ ದೇವತೆಗಳೊಡನೆ ಯುದ್ಧ ಮಾಡಿ ಸತ್ತುಹೋಗಿದ್ದರು. ದಿತಿಗೆ ಇಂದ್ರನನ್ನು ಸೋಲಿಸಬಲ್ಲ ಪರಾಕ್ರಮಿ ಮಗನೊಬ್ಬ ಬೇಕಾಗಿದ್ದ. ಸಮಯ ನೋಡಿ ದಿತಿದೇವಿಯು ಗಂಡ ಕಶ್ಯಪರ ಮುಂದೆ ತನ್ನ ಬಯಕೆಯನ್ನು ಹೇಳಿಕೊಂಡಳು. ಕಶ್ಯಪರು ತ್ರಿಕಾಲಜ್ಞಾನಿಗಳು. ಅವರು ದಿತಿದೇವಿಯ ಬಯಕೆಯನ್ನು ನಿರಾಕರಿಸಲಿಲ್ಲ. ಆದರೆ ಕಠಿಣವಾದ ನಿಯಮಗಳನ್ನು ಹೇಳಿದರು. ಒಂದು ನೂರು ವರ್ಷಗಳ ವರೆಗೆ ಗರ್ಭವನ್ನು ಧರಿಸಿ ಶುಚಿತ್ವ,ವೃತ, ಆಚರಣೆಗಳಿಂದ ನಿಷ್ಠಳಾಗಿ ನಡೆದುಕೊಂಡರೆ ಮಾತ್ರ ನಿನ್ನ ಬಯಕೆ ಈಡೇರಲು ಸಾಧ್ಯವೆಂದು ಹೇಳಲಾಗಿ ದಿತಿದೇವಿಯು ಒಪ್ಪಿಕೊಂಡಳು. ಆಡಿದ ಮಾತಿನಂತೆ ಕಶ್ಯಪರು ಗರ್ಭಾದಾನ ಮಾಡಿ ತಪಸ್ಸು ಮಾಡುವ ಸಲುವಾಗಿ ಕಾಡಿಗೆ ಹೊರಟುಹೋದರು.


     ಇತ್ತ ದಿತಿದೇವಿಯು ಕಶ್ಯಪರಿಗೆ ಕೊಟ್ಟ ಮಾತಿನ ಪ್ರಕಾರ ವೃತನಿಷ್ಠಳಾಗಿ ಬಹಳ ಜತನದಿಂದ ಗರ್ಭಸ್ಥ ಮಗುವನ್ನು ಕಾಪಾದಿಕೊಂದಿದ್ದಳು. ಹೇಗೋ ವಿಷಯವು ಇಂದ್ರನಿಗೆ ತಿಳಿಯಿತು. ತನಗೆ ಶತ್ರುವಾಗಲಿರುವ ಮಗುವನ್ನು ಹೇಗಾದರೂ ಮಾಡಿ ನಾಶ ಮಾಡಬೇಕೆಂದು ಅವನು ಉಪಾಯ ಮಾಡಿದನು. ಬಾಲ ಸೇವಕನ ವೇಷ ಧರಿಸಿ ಅವನು ದಿತಿಯ ಹತ್ತಿರ ಕೆಲಸಕ್ಕೆ ಸೇರಿದನು. ಕಶ್ಯಪರು ಹೇಳಿದ ನೂರು ವರ್ಷಗಳಲ್ಲಿ ತೊಂಭತ್ತು ವರ್ಷಗಳು ಸರಿಯಾಗಿ ನಡೆದವು.ಇಂದ್ರನು ಬಹಳ ಸಮಾಧಾನದಿಂದ  ಅಲ್ಲಿಯೇ ಸೇವಕನ ವೇಷದಲ್ಲಿದ್ದು ದಿತಿದೇವಿಯಿಂದ ವೃತಾಚರಣೆಯಲ್ಲಿ ಸ್ವಲ್ಪವಾದರೂ ಲೋಪವಾದರೆ ಸಾಕು, ಗರ್ಭಸ್ಥ ಮಗುವನ್ನು ಅದೇ ನೆವದಿಂದ ಕೊಂದುಬಿಡಲು ಆಲೋಚಿಸುತ್ತಿದ್ದನು. 

ಮರುತ ಗಣ ದೇವತೆಗಳು 
   ಅಂತೂ ಅವನಿಗೆ ಕಾಲವೊಂದು ಕೂಡಿಬಂತು. ಒಂದು ರಾತ್ರಿ ದಿತಿ ಶೌಚ ಶುದ್ಧಿಗಾಗಿ ಹೋಗಿ ಆಯಾಸದಿಂದ ಕೈಕಾಲು ತೊಳೆದುಕೊಳ್ಳದೆ ಹಾಗೆಯೇ ಮಲಗಿಬಿಟ್ಟಳು. ಈ ಸಣ್ಣ ದೋಷವನ್ನೇ ನೆವ ಮಾಡಿಕೊಂಡ ಇಂದ್ರ ದಿತಿಯ ಗರ್ಭಸ್ಥ ಮಗುವನ್ನು ಕೊಂದು ಹಾಕಲು ಆಲೋಚಿಸಿ ಅವಳ ಗರ್ಭವನ್ನು ಸೂಕ್ಷ್ಮರೂಪದಿಂದ ಪ್ರವೇಶಿಸಿದ. ಆದರೆ ಪರಮಾತ್ಮನ ಸಂಕಲ್ಪ ಬೇರೆಯೇ ಇತ್ತು.

   ತನ್ನ ವಜ್ರಾಯುಧದಿಂದ ದಿತಿಯ ಹೊಟ್ಟೆಯಲ್ಲಿದ್ದ ಪಿಂಡಕ್ಕೆ ಬಲವಾಗಿ ಹೊಡೆದಾಗ ಅದು ಏಳು ತುಂಡುಗಳಾಯಿತು. ವಜ್ರಾಯುಧದ ಆಘಾತದ ನೋವನ್ನು ತಾಳಲಾರದೆ ಅವು ಒಂದೇ ಸವನೆ ರೋದಿಸತೊದಗಿದವು. ಆಗ ಇಂದ್ರನು ಅವುಗಳನ್ನು ಸಮಾಧಾನಿಸುತ್ತಾ 'ಮಾರೋದಿಹಿ'(ಅಳಬೇಡಿ) ಎಂದು ಹೇಳುತ್ತಾ ಮತ್ತೊಮ್ಮೆ ವಜ್ರಾಯುಧದಿಂದ ಪ್ರಹಾರ ಮಾಡುತ್ತಾನೆ. ಈ ಸಲ ಏಟು ಬಹಳ ಪ್ರಬಲವಾದ್ದರಿಂದ ಒಂದೊಂದು ತುಂಡು ಏಳು ಹೋಳಾಗಿ ಒಟ್ಟು ನಲವತ್ತೊಂಭತ್ತು   ತುಂಡುಗಳಾಗಿ ಎಲ್ಲವೂ ಮತ್ತಷ್ಟು ಜೋರಾಗಿ ಅಳತೊಡಗುತ್ತವೆ. ಇಂದ್ರನು  ಪುನಃ 'ಮಾರೋದಿಹಿ" ಎಂದು ಸಮಾಧಾನ ಮಾಡಿ ದಿತಿಯ ಉದರದಿಂದ ಹೊರಗೆ ಬಂದುಬಿಡುತ್ತಾನೆ. 

   ನಂತರ ದಿತಿದೇವಿಯು ೪೯ ಜನ ಅತ್ಯಂತ ತೇಜೋವಂತರಾದ ಮಕ್ಕಳನ್ನು ಹೆರುತ್ತಾಳೆ. ದಿವ್ಯ ದೃಷ್ಟಿಯಿಂದ ಎಲ್ಲವನ್ನೂ ತಿಳಿದುಕೊಂಡ ಕಶ್ಯಪರು ಅಲ್ಲಿಂದಲೇ ಮಕ್ಕಳನ್ನು ಆಶೀರ್ವದಿಸುತ್ತಾರೆ. ಅವರ ಪ್ರಭಾವದಿಂದಾಗಿ ಇಂದ್ರನ ಮೇಲಿದ್ದ ಅವಳ ದ್ವೇಷವು ಹೊರಟುಹೋಗುತ್ತದೆ. ಇದನ್ನರಿತ ಇಂದ್ರ ದಿತಿದೇವಿಯ ಮಕ್ಕಳಿಗೆ ತನ್ನ ಅಮೃತ ಹಸ್ತವನ್ನು ಕೊಟ್ಟು ಕಾಪಾಡುತ್ತಾನೆ. ಇಂದ್ರನು 'ಮಾರೋದಿಹಿ' ಎಂದು ಮಕ್ಕಳನ್ನು ಸಮಾಧಾನಿಸಿದ್ದರಿಂದ ಹುಟ್ಟಿದ ೪೯ ಮಕ್ಕಳ ಗುಂಪು ಮರುತ ಗಣ ದೇವತೆಗಳು  ಎಂದು ಪ್ರಸಿದ್ಧರಾಗುತ್ತಾರೆ. ಹೀಗೆ ದಿತಿದೇವಿಯು ವೃತ ಲೋಪ ಮಾಡಿದರೂ ಕಶ್ಯಪರ ಅನುಗ್ರಹದಿಂದ ಒಳ್ಳೆಯದೇ ಆಗುತ್ತದೆ. ಇಂದ್ರನ ಶತ್ರುಗಳಾಗಬೇಕಿದ್ದವರೆಲ್ಲ ಅವನ ಮಿತ್ರರಾಗಿ ದೇವಲೋಕವನ್ನು ಸೇರುತ್ತಾರೆ. ಹೀಗೆ ದಿತಿದೇವಿಯಲ್ಲಿ ಕಶ್ಯಪರಿಂದ ದೇವಗಣವೊಂದು ಹುಟ್ಟಿ ಅವಳಿಗೆ ಬಹುವಾಗಿ ಸಂತೋಷವಾಗುತ್ತದೆ. 
  











   


ಗುರುವಾರ, ಜನವರಿ 19, 2012

ಸೂರ್ಯನನ್ನು ಸಾಣೆ ಹಿಡಿದ ವಿಶ್ವಕರ್ಮ

ಸೂರ್ಯ-ಸಂಜ್ಞಾ-ಛಾಯಾ  

     ಸೂರ್ಯ ಅತ್ಯಂತ ತೇಜಸ್ವಿ ದೇವತೆ. ಅವನು ಸಾಕ್ಷಾತ್ ಭಗವಾನ್ ನಾರಾಯಣನ ಸ್ವರೂಪ. ದೇವತೆಗಳ  ಬಡಗಿಯಾದ ವಿಶ್ವಕರ್ಮನಿಗೆ ಸಂಜ್ಞಾ ಎಂಬ ಸುಂದರ, ಸುಶೀಲ ಮಗಳು ಇರುತ್ತಾಳೆ. ಸೂರ್ಯದೇವನ ತೇಜಸ್ಸಿಗೆ ಮಾರುಹೋದ ವಿಶ್ವಕರ್ಮ ತನ್ನ ಮಗಳು ಸಂಜ್ಞಾಳನ್ನು ಸೂರ್ಯನಿಗೆ ಕೊಟ್ಟು ಮದುವೆ ಮಾಡುತ್ತಾನೆ. ಸೂರ್ಯ ಹಾಗೂ ಸಂಜ್ಞಾರಿಗೆ ಮೂರು ಮಕ್ಕಳು ಹುಟ್ಟುತ್ತಾರೆ. ಮೊದಲನೆಯ ಮಗ ಮನು, ಆಮೇಲೆ ಅವಳಿ ಜವಳಿ ಮಕ್ಕಳು ಯಮ ಮತ್ತು ಯಮಿ. ಬರಬರುತ್ತಾ ಸೂರ್ಯನ  ತೇಜಸ್ಸು ಹೆಚ್ಚತೊಡಗುತ್ತದೆ. ಸಂಜ್ಞಾ ಬಲು ಸೂಕ್ಷ್ಮ ಹೆಂಗಸು ಅವಳಿಗೆ ಸೂರ್ಯನ ಪ್ರಖರ ತೇಜಸ್ಸನ್ನು ತಾಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಗಂಡ ತೇಜಃಪುಂಜನಾದಷ್ಟೂ ಸಂಜ್ಞಾಳಿಗೆ ಹಿಂಸೆಯಾಗತೊಡಗುತ್ತದೆ.   
     
     ಸಂಜ್ಞಾ ಒಂದು ಉಪಾಯವನ್ನು ಮಾಡುತ್ತಾಳೆ. ತನ್ನ ನೆರಳಿನಿಂದ ಪ್ರತಿರೂಪವೊಂದನ್ನು ಮಾಡಿ ಅದಕ್ಕೆ ಜೀವ ತುಂಬಿ ತನ್ನ  ಸ್ಥಾನದಲ್ಲಿ ಅವಳನ್ನು ಬಿಟ್ಟು ತಾನು ತಪಸ್ಸು ಮಾಡಲು ಗುಟ್ಟಾಗಿ ತೆರಳುತ್ತಾಳೆ. ಸಂಜ್ಞೆಯ ನೆರಳು ಛಾಯಾ ಸ್ವಾಭಾವಿಕವಾಗಿ ಅವಳಂತೆಯೇ ಇರುತ್ತಾಳೆ. ಆದ್ದರಿಂದ ಸೂರ್ಯನಿಗೆ ಸ್ವಲ್ಪವೂ ಸಂಶಯ ಬರುವುದಿಲ್ಲ. ಅವನು ಛಾಯಾದೇವಿಯೊಂದಿಗೆ ಸರಸದಿಂದಲೇ ಸಂಸಾರ ಮಾಡುತ್ತಾನೆ. ಛಾಯಾದೇವಿಗೆ ಸೂರ್ಯನಿಂದ ಮೂವರು ಮಕ್ಕಳು ಹುಟ್ಟುತ್ತಾರೆ. ಮೊದಲನೆಯವ ಶನಿ, ಎರಡನೆಯವ ಮತ್ತೊಬ್ಬ ಮನು ಮೂರನೆಯವಳು ತಪತಿ. ಈ ಮನು ತನ್ನ ಅಣ್ಣ ಮನುವನ್ನೇ ಸಂಪೂರ್ಣ ಹೋಲುತ್ತಿದ್ದರಿಂದ ಇವನ್ನು ಸಾವರ್ಣಿಮನು ಎಂದು ಕರೆಯಲಾಗುತ್ತದೆ.


      ಛಾಯಾದೇವಿಯು ತನಗೆ ಮಕ್ಕಳಾಗುವವರೆಗೆ ಸವತಿಯ ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಳು. ತನಗೂ ಮಕ್ಕಳಾದ ಮೇಲೆ ಸಂಜ್ಞೆಯ ಮಕ್ಕಳನ್ನು ಅಸಡ್ಡೆಯಿಂದ ನೋಡಲಾರಂಭಿಸುತ್ತಾಳೆ. ಒಂದು ಸಲ ತನ್ನ ಮಕ್ಕಳೂ ಸವತಿಯ ಮಕ್ಕಳೂ ಜಗಳ ಮಾಡಲಾರಂಭಿಸಿದಾಗ ಸಾರಾಸಾರ ವಿಚಾರ ಮಾಡದೆ ತನ್ನ ಸ್ವಂತ ಮಕ್ಕಳ ಪರವಾಗಿ ನಿಂತು ಮಲಮಗ ಯಮನನ್ನು ಚೆನ್ನಾಗಿ ದಂಡಿಸಿ ಶಾಪ ಕೊಟ್ಟುಬಿಡುತ್ತಾಳೆ.


     ಪ್ರಸಂಗ ಶಾಪ ಕೊಡುವಷ್ಟು ವಿಕೋಪಕ್ಕೆ ಹೋದಾಗ ಸೂರ್ಯನಿಗೆ ಸಂಶಯ ಬರುತ್ತದೆ. ಸ್ವಂತ ಮಗನಿಗೆ ಕೇಡು ಬಯಸಿ ಯಾರಾದರೂ ಶಾಪ ಕೊಡುವುದು ಉಂಟೆ? ಇವಳು ಯಮನಿಗೆ ತಾಯಿಯೇ ಆಗಿರಲಿಕ್ಕಿಲ್ಲವೆಂದುಕೊಂಡು ಅವಳನ್ನು ಗದರಿಸಿ ಕೇಳಿದಾಗ ಛಾಯಾದೇವಿಯು ನಡೆದ ಸಮಾಚಾರವನ್ನು ವಿವರವಾಗಿ ತಿಳಿಸಿಬಿಡುತ್ತಾಳೆ. ಬೆಂಕಿಯ ಬೆಟ್ಟದಂತಿರುವ ನಿಮ್ಮ ಉರಿಯ ಅಪ್ಪುಗೆಯಿಂದ ತಪ್ಪಿಸಿಕೊಳ್ಳಲು ನನ್ನನ್ನು ಇಲ್ಲಿರಿಸಿ ಸಂಜ್ಞಾ ತಪಸ್ಸಿಗೆ ತೆರಳಿದ್ದಾಳೆಂದು ಹೇಳುತ್ತಾಳೆ. ತನ್ನ ಮಡದಿಯ ಪ್ರತಿರೂಪವಾದ ಈ ನೆರಳನಾರಿಯ ಜೊತೆಗಿನ ಮ್ರುಲಾಟ ಇನ್ನು ಸಾಕು ಎಂದು ಸೂರ್ಯನಿಗೆ ಅನ್ನಿಸುತ್ತದೆ. 


     ಜಗತ್ತಿಗೇ ಕಣ್ಣಿನಂತಿರುವ ಸೂರ್ಯನು ತನ್ನ ದಿವ್ಯ ದೃಷ್ಟಿಯಿಂದ ತನ್ನ ಮೂಲ ಮಡದಿ ಇರುವ ತಾಣವನ್ನು ನೋಡುತ್ತಾನೆ. ಅವಳು ಕುದುರೆ ರೂಪದಿಂದ ತನ್ನ ಪತಿಯನ್ನೇ ಕುರಿತು ತಪಸ್ಸು ಮಾಡುತ್ತಿರುತ್ತಾಳೆ. ತಾನೂ ಗಂಡು ಕುದುರೆಯ ರೂಪ ಧರಿಸಿ ಸಂಜ್ಞಾಳ ಹತ್ತಿರ ಬರುತ್ತಾನೆ. ಗಂಡನನ್ನು ಕಂಡ ಕುದುರೆ ರೂಪದಲ್ಲಿದ್ದ ಸಂಜ್ಞಾ ಹರ್ಷಭರಿತಲಾಗುತ್ತಾಳೆ. ಗಂಡ ಹೆಂಡತಿಯ ಪುನರ್ಮಿಲನವಾಗುತ್ತದೆ. ಅವರ ರಾಗರತಿಯ ಫಲವಾಗಿ ಮೂವರು ಮಕ್ಕಳು ಜನಿಸುತ್ತಾರೆ. ಅವಳಿಜವಳಿಗಳಾದ ಅಶ್ವಿನಿ ದೇವತೆಗಳು ಹಾಗೂ ಮೂರನೆಯ ಮಗ ರೇತಸ.


ಗುಜರಾತ್ ನ ವಧೆರಾದಲ್ಲಿರುವ ಸೂರ್ಯ ದೇವಾಲಯ   
     ಅನಂತರ ಸೂರ್ಯದೇವನು ತನ್ನ ಮಡದಿಗೆ ಮೂಲರೂಪ ಧರಿಸಲು ಹೇಳಿ ಅವಳನ್ನು ಕರೆದುಕೊಂಡು ತನ್ನ ಲೋಕಕ್ಕೆ ಬರುತ್ತಾನೆ. ಮಾವ ವಿಶ್ವಕರ್ಮನಿಗೆ ವಿಷಯ ತಿಳಿದು ಚಿಂತೆಗೊಳಗಾಗುತ್ತಾನೆ. ತನ್ನ ಮಗಳೋ ಮೇಣದ ಗೊಂಬೆ ಆದರೆ ಅಳಿಯನೂ ಬೆಂಕಿಯ ಬಣವೆ. ಇದನ್ನು ಸರಿಪಡಿಸಲು ಅವನು ಉಪಾಯವೊಂದನ್ನು ಕಂಡುಹಿಡಿಯುತ್ತಾನೆ. ಹೇಳಿಕೇಳಿ ಅವನು ಸ್ವರ್ಗಲೋಕದ ಬಡಗಿ. ಸೂರ್ಯದೇವನ ಹೆಚ್ಚಿನ ತೆಜಸ್ಸನ್ನೆಲ್ಲಾ ತನ್ನ ಗಾಡಕ್ಕೆ ಹಾಕಿ ಸಾಣೆ ಹಿಡಿಯತೊಡಗುತ್ತಾನೆ. ಸೂರ್ಯನ ವಿರಾಟ್ ಕಾಯವನ್ನೆಲ್ಲ ಕೊರೆದು ತೆಗೆದು ಎಂಟನೆಯ ಒಂದಂಶಕ್ಕೆ ಇಳಿಸುತ್ತಾನೆ. ಹೀಗೆ ವಿಷ್ಣುವಿನ ಸಂಕಲ್ಪದಂತೆ ವಿಶ್ವಕರ್ಮನ ಬೃಹದ್ ಯಂತ್ರದಲ್ಲಿ ಸೂರ್ಯನ ತೆಜೋಗೊಲಕವು ಹದಗೊಂಡು ಸೌಮ್ಯವಾಗುತ್ತದೆ.

    ಹೀಗೆ ಉದುರಿಬಿದ್ದ ತೇಜಸ್ಸಿನ ಖಂಡ ತುಂಡುಗಳನ್ನು ಆಯ್ದುಕೊಂಡ ವಿಶ್ವರ್ಮನು ವಿಷ್ಣುವಿನ ಸಲುವಾಗಿ ಸುದರ್ಶನ ಚಕ್ರವನ್ನು ಮಾಡಿಕೊಡುತ್ತಾನೆ. ಉಳಿದ ಚೂರುಗಳಿಂದ ಶಿವನಿಗೆ ತ್ರಿಶೂಲವನ್ನೂ, ಸ್ಕಂದನ ಶಕ್ತಿ ಆಯುಧವನ್ನೂ, ಕುಬೇರನಿಗೆ ಪುಷ್ಪಕ ವಿಮಾನವನ್ನೂ, ಉಳಿದ ತೆಜಸೀನ ಕಿಡಿಗಳಿಂದ ಎಲ್ಲ ದೇವತೆಗಳಿಗೆ ಶಸ್ತ್ರಾಸ್ತ್ರಗಳನ್ನೂ ತಯಾರಿಸಿಕೊಡುತ್ತಾನೆ.  ಹೀಗೆ ಸೂರ್ಯದೇವನು ಸೌಮ್ಯನಾಗಿ ದೇವತೆಗಳೆಲ್ಲ ವಿವಿಧ ಆಯುಧಗಳನ್ನು ಹೊಂದಿ ತೇಜೋವಂತರಾಗುತ್ತಾರೆ. ಛಾಯಾದೇವಿಯು ಅಂತರ್ಧಾನಳಾಗಿ ತನ್ನ ಮೂಲರೂಪವಾದ ಸಂಜ್ಞಾದೇವಿಯಲ್ಲಿ ಲೀನವಾಗಿಬಿದುತ್ತಾಳೆ. 

ಭಾನುವಾರ, ಜನವರಿ 15, 2012

ಶ್ರೀಗಣೇಶಾಯನಮಃ

ವಿಘ್ನನಿವಾರಕ ಗಣೇಶ


ಎಲ್ಲರಿಗೂ ಗೊತ್ತು, ಯಾವುದೇ ಕೆಲಸವನ್ನು ಆರಂಭಿಸುವುದಕ್ಕಿಂತ ಮುಂಚೆ ಶ್ರೀ ಗಣೇಶನನ್ನು ಸ್ತುತಿಸಿಯೇ ಮುಂದುವರಿಯಬೇಕೆಂದು.ಯಾಕೆಂದರೆ ಗಣೇಶ ಆಕಾಶ ತತ್ವಾಭಿಮಾನಿ. ಅವನು ನಮ್ಮ ಮತ್ತು ಜಗತ್ತಿನ ನಿಯಾಮಕನ ನಡುವಿನ ಕೊಂಡಿಯಿದ್ದಂತೆ. ನಾವು ಮಾಡಿದ ಒಳ್ಳೆಯ ಕೆಲಸಗಳನ್ನು ಒಯ್ದು ದೇವರಿಗೆ ತಲುಪಿಸುವವನೆ ಶ್ರೀ ಗಣೇಶ. ಹೀಗಾಗಿಯೇ ಗಣೇಶನಿಗೆ ಪ್ರಥಮ ವಂದನೆ. ಅನೇಕ ಹೆಸರುಗಳಿಂದ ಪ್ರಸಿದ್ಧನಾಗಿರುವ ಗಣೇಶನನ್ನು ಎಲ್ಲ ಜಾತಿಯ ಜನರೂ ಪುಉಜಿಸುವುದು ಒಂದು ವಿಶೇಷ.

     ಗಣೇಶನ ಆಕಾರವೋ ಅತಿಶಯ ವೈಚಿತ್ರ್ಯವುಳ್ಳದ್ದು  ಆದ್ದರಿಂದಲೇ ಗಣೇಶ ಮಕ್ಕಳಿಗೂ ಅತಿ ಪ್ರಿಯನಾದ ದೇವರು. ಭಾದ್ರಪದ ಶುಕ್ಲ ಚತುರ್ಥಿ ಗಣೇಶನ ಹುಟ್ಟುಹಬ್ಬ.ಅಂದು ಎಲ್ಲರಿಗೂ ಸಂಭ್ರಮ. ಅಂದು  ಮಣ್ಣಿನ ಗಣಪನನ್ನು ತಂದು ಪೂಜಿಸುವುದು ಸಂಪ್ರದಾಯ. 
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ 
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಶು ಸರ್ವದಾ

ಮಣ್ಣಿನಿಂದ ತಯಾರಿಸಿದ ಮಗುವಿಗೆ ಪ್ರಾಣಪ್ರತಿಷ್ಠೆ
ಮಾಡಿ ಮನೆಯನ್ನು ಕಾಯುವ ದೊಡ್ಡ ಜವಾಬ್ದಾರಿಯನ್ನು
  ಮಗು ಗಣೇಶನಿಗೆ ವಹಿಸುತ್ತಿರುವ ತಾಯಿ 
ಪಾರ್ವತಿ   
     ಗಣೇಶನ ಬಗ್ಗೆ ಅನೇಕ ಕಥೆಗಳಿವೆ. ಅವುಗಳಲ್ಲೆಲ್ಲ ಅತ್ಯಂತ ಪ್ರಸಿದ್ಧವಾದದ್ದೆಂದರೆ ಪಾರ್ವತಿ ತನ್ನ ಮೈಯ ಮಣ್ಣಿನಿಂದ ಸುಂದರವಾದ ಗೊಂಬೆಯೊಂದನ್ನು ಮಾಡಿದ ಕಥೆ. ಒಂದು ದಿನ ಪಾರ್ವತಿ ಸ್ನಾನಕ್ಕೆ ಹೋಗಬೇಕಿತ್ತು. ಮನೆಯಲ್ಲಿ ಯಾರೂ ಇಲ್ಲ. ಅದು ಮೊದಲೇ ಪರಶಿವನ ಮನೆ. ಬರಹೋಗುವ ಭಕ್ತರ ಸಂಖ್ಯೆ ಅಪಾರ. ವಿಶ್ವಾಸಿಕರೊಬ್ಬರು ಬಂದವರಿಗೆಲ್ಲ ಉತ್ತರ ಹೇಳಬೇಕು. ತನ್ನ ಮೈಯ ಮಣ್ಣಿನಿಂದಲೇ ಗೊಂಬೇಯೊಂದನ್ನು ಮಾಡಿ ಅದಕ್ಕೆ ಪ್ರಾಣ ಪ್ರತಿಷ್ಠೆ ಮಾಡುತ್ತಾಳೆ. ಅದಕ್ಕೆ ಗಣೇಶನೆಂದು ಕರೆಯುತ್ತಾಳೆ.  ಅದು ಜಗಜ್ಜನನಿ ಪಾರ್ವತಿ ಸೃಷ್ಟಿಸಿದ ಮಗು. ಸ್ವಾಭಾವಿಕವಾಗಿಯೇ ಅತಿ ಸುಂದರವಾಗಿರುತ್ತದೆ. ಮಗು ತಾಯಿಗೆ ಅತಿ ವಿಧೆಯವಾಗಿರುತ್ತದೆ ಕೂಡಾ. ಪಾರ್ವತಿ ತನ್ನ ಮನೆಯ  ಜವಾಬ್ದಾರಿಯನ್ನು ಪುಟ್ಟ ಮಗುವಿಗೆ ವಹಿಸಿ ನಿರಾತಂಕವಾಗಿ ಸ್ನಾನಕ್ಕೆ ತೆರಳುತ್ತಾಳೆ. 
     ಅವಳು ಹೋದ ಕೂಡಲೇ ಇತ್ತ ಪರಶಿವ ತನ್ನ ಮನೆಗೆ ಬರುತ್ತಾನೆ. ಮಗು ಗಣೇಶ ಶಿವನನ್ನು ಒಳಹೋಗಲು ಬಿಡುವುದಿಲ್ಲ. ಶಿವ ಕೋಪಿಸಿಕೊಳ್ಳುತ್ತಾನೆ  ಆದರೆ ಪ್ರಯೋಜನವಾಗುವುದಿಲ್ಲ. ಮಗು ಗಣೇಶ ತಾಯಿಯ ಆಜ್ಞಾಧಾರಕನಾಗಿರುತ್ತಾನೆ. ಆದರೆ ಶಿವನೋ ಪ್ರಳಯಾಂತಕನಾಗಿಬಿಡುತ್ತಾನೆ. ಆದರೆ ಪುಟ್ಟ ಗಣೇಶ ಹೆದರುವುದಿಲ್ಲ. ಶಿವನನ್ನು ಮನೆಯೊಳಗೆ ಹೋಗಲು 
ಬಿಡುವುದೇ ಇಲ್ಲ.  ಕೋಪಗೊಂಡ ಶಿವ ಬಾಲಕನ ತಲೆಯನ್ನು ಕಡಿಯಲು ಆಜ್ಞಾಪಿಸುತ್ತಾನೆ. ಬಾಲಕನ ಶಿರ ದೇಹದಿಂದ  ಬೇರ್ಪಡುತ್ತದೆ. ಶಿವ ಮನೆಯೊಳಗೆ ನಡೆಯುತ್ತಾನೆ.
ಬಾಲಕ ಗಣೇಶ ಕೈಯಲ್ಲಿ ಗದೆ ಹಿಡಿದು ತಾಯಿಯ
ಆಜ್ಞೆಯಂತೆ ಮನೆಯ ಬಾಗಿಲು ಕಾಯುತ್ತಿರುವುದು
 
ಸಿಟ್ಟಿನಿಂದ ಆರ್ಭಟಿಸುತ್ತಿರುವ ಶಿವ 
     ರುಂಡವಿಲ್ಲದೇ ಬಿದ್ದುಕೊಂಡ ಮಗುವನ್ನು ನೋಡಿದ ಪಾರ್ವತಿಯ ಎದೆಯೂಡೆಯುತ್ತದೆ. ಆರ್ದ್ರವವಾಗಿ ಪ್ರಲಾಪಿಸತೊದಗುತ್ತಾಳೆ. ಶಿವನಿಗೆ ಎಲ್ಲವೂ ಅರ್ಥವಾಗಿ ಪಾರ್ವತಿಯನ್ನು ಸಂತೈಸತೊದಗುತಾನೆ. ಆದರೆ ಮಗುವನ್ನು ಕಳೆದುಕೊಂಡ ಪಾರ್ವತಿಯ ಶೋಕ ಇನ್ನೂ ಹೆಚ್ಚುತ್ತದೆ. ಮಗುವನ್ನು ಪುನಃ ಜೀವನ್ತಗೊಲಿಸುವುದಾಗಿ ಮಾತು ಕೊಟ್ಟ ನಂತರ ಪಾರ್ವತಿ ಸಮಾಧಾನ ಹೊಂದುತ್ತಾಳೆ. ಮಗುವಿನ ದೇಹಕ್ಕೆ ರುಂಡ ಜೋಡಿಸಿ ಪುನರುಜ್ಜೀವನಗೊಳಿಸಲು ಶಿವ ತನ್ನ ಗಣಗಳಿಗೆ ಆಜ್ಞಾಪಿಸುತ್ತಾನೆ. ಆದರೆ ಕಡಿದುಹೋದ ರುಂಡವು ದೊರಕಲೋಲ್ಲದಾಗಿದೆ. ಗಣಗಳಿಗೆ ಏನು ಮಾಡಬೇಕೆಂದು ತಿಳಿಯಲೊಲ್ಲದಾಗಿದೆ. ವಿಷಯವನ್ನು ಶಿವನಿಗೆ ಅರಿಕೆ ಮಾಡಿಕೊಳ್ಳುತ್ತಾರೆ. ಆಗ ಶಿವನು ಪರಿಹಾರವೊಂದನ್ನು ಸೂಚಿಸುತ್ತಾನೆ. ಸಮೀಪದಲ್ಲಿ ಯಾವುದೇ ಪ್ರಾಣಿಯು ಉತ್ತರ ದಿಕ್ಕಿಗೆ ತಲೆ ಮಾಡಿ ಸತ್ತು ಬಿದ್ದಿದ್ದರೂ ಅದರ ತಲೆಯನ್ನು ತಂದು ಮಗುವಿಗೆ ಜೋಡಿಸಲು ತನ್ನ ಗಣಗಳಿಗೆ ಆಜ್ಞಾಪಿಸುತ್ತಾನೆ. 
     ಹತ್ತಿರದಲ್ಲಿಯೇ ಆನೆಯೊಂದು ಸತ್ತು ಬಿದ್ದಿರುತ್ತದೆ. ಅದರ ರುಂಡವನ್ನು ಕಡಿದುಕೊಂಡು ಬಂದು ಮಗುವಿನ ಶರೀರಕ್ಕೆ ಜೋಡಿಸುತ್ತಾರೆ. ಮಗು ಎದ್ದು ಕುಳಿತುಕೊಳ್ಳುತ್ತದೆ. ತನ್ನ ಮಗು ಬದುಕಿರುವುದನ್ನು ಕಂಡ ಪಾರ್ವತಿ ಹರ್ಷಭರಿತಳಾಗುತ್ತಾಳೆ. ಹೀಗೆ ಶಿವನ ಕಾರುಣ್ಯದಿಂದ ಗಣೇಶನಿಗೆ ಮತ್ತೊಮ್ಮೆ ಜೀವ ದೊರೆಯುತ್ತದೆ. ಅವನು ಶಿವ-ಪಾರ್ವತಿಯರ ಅಚ್ಚು ಮೆಚ್ಚಿನ ಮಗನಾಗಿ ವಿದ್ಯಾ ಬುದ್ಧಿಗಳಿಗೆ ಅಧಿದೇವನಾಗುತ್ತಾನೆ.