ಗುರುವಾರ, ಫೆಬ್ರವರಿ 2, 2012

ವಿಶ್ವಾಮಿತ್ರ-ಜಮದಗ್ನಿ-ಪರಶುರಾಮ

  
ಅದಲುಬದಲಾದ ಚರುಗಳು 


ಗಾಧಿರಾಜ ಚಂದ್ರವಂಶದ ಪ್ರಸಿದ್ಧ ರಾಜರಲ್ಲೊಬ್ಬ. ಇವನಿಗೆ ಸತ್ಯವತಿ ಎಂಬ ಸುಂದರವಾದ ಗುಣವತಿ ಮಗಳಿದ್ದಳು. ಅವಳ ಸೌಂದರ್ಯ ಹಾಗೂ ಸದ್ಗುಣಗಳು ಲೋಕದಲ್ಲೆಲ್ಲಾ ಪ್ರಸಿದ್ಧಿಗೊಂಡು ಅವಳನ್ನು ಮದುವೆಯಾಗಲು ಅನೇಕ ರಾಜಕುಮಾರರು ಹಾತೊರೆಯುತ್ತಿದ್ದರು. 

ಹತ್ತಿರದ ಕಾಡಿನಲ್ಲಿ ಋಚೀಕನೆಂಬ ಋಷಿ ತಪಸ್ಸು, ಹೋಮ-ಹವನಗಳನ್ನು ಮಾಡುತ್ತಾ  ಸಿದ್ಧಿಪುರುಷನೆನಿಸಿದ್ದನು. ಒಂದು ದಿನ ಅವನಿಗೆ ಸ್ವಪ್ನ ಸೂಚನೆಯಾಗಿ ವಿಷ್ಣುಭಗವಾನನು ಸ್ವತಃ ಅವನ ವಂಶದಲ್ಲಿ  ಅವತರಿಸುವುದಾಗಿ ಆಶ್ವಾಸನೆಯನ್ನಿತ್ತನು. ಋಚೀಕನಿಗೆ ಬಹಳ ಹರ್ಷವಾಯಿತು. ಶ್ರೇಷ್ಠ ಕನ್ನ್ಯೆಯೊಬ್ಬಳನ್ನು ಮದುವೆಯಾಗಿ ವಂಶೋದ್ಧಾರಕ್ಕೆ ಕಾರಣವಾಗಬೇಕೆಂದು ನಿರ್ಧರಿಸಿದನು. ಅನುರೂಪಳಾದ ಕನ್ನ್ಯೆಯನ್ನು ಶೋಧಿಸಲು ಪ್ರಯತ್ನಿಸಿದಾಗ ಗಾಧಿರಾಜನ ಮಗಳು ಸತ್ಯವತಿಯ ಬಗ್ಗೆ ತಿಳಿಯಿತು.

ಋಚೀಕ ಋಷಿ 
ಋಚೀಕನು ತಕ್ಷಣ ಗಾಧಿರಾಜನನ್ನು ಭೇಟಿಯಾಗಿ ಸತ್ಯವತಿಯನ್ನು ತನಗೆ ಕೊಟ್ಟು ಮಾಡುವೆ ಮಾಡಿಕೊಡಬೇಕೆಂದು ಕೇಳಿಕೊಂಡನು. ಗಾಧಿರಾಜನು ತನ್ನ ಮಗಳನ್ನು ಋಚೀಕನಿಗೆ ಕೊಡಲು ಕರಾರೊಂದನ್ನು ಮುಂದಿರಿಸಿದ. ಒಂದು ಕಿವಿ ಮಾತ್ರ ಕಪ್ಪಗಿದ್ದು ಉಳಿದೆಲ್ಲ ಭಾಗವೂ ಅತ್ಯಂತ ಶುಭ್ರವಾಗಿರುವ ಶ್ವೇತ ಬಣ್ಣದ ಒಂದು ಸಹಸ್ರ ಕುದುರೆಗಳನ್ನು ಕನ್ಯಾಶುಲ್ಕವಾಗಿ ಕೊಟ್ಟರೆ ತಾನು ತನ್ನ ಮಗಳನ್ನು ಕೊಡುವುದಾಗಿ ಹೇಳಿದ. ಇಂತಹ ಸಾವಿರ ಕುದುರೆಗಳಿದ್ದವರನ್ನು ಯಾರೂ ಯುದ್ಧದಲ್ಲಿ ಸೋಲಿಸಲಾರರು ಎಂದು ಆಗ ನಂಬಿಕೆಯಿತ್ತು. ಆದರೆ ಋಚೀಕನಿಗೆ ಇದು ಬಹಳ ಸುಲಭದ ಕೆಲಸವಾಯಿತು. ತನ್ನ ತಪೋಬಲವನ್ನು ಉಪಯೋಗಿಸಿ ವರುಣನಿಂದ ಇಂತಹ ಸಾವಿರ ಕುದುರೆಗಳನ್ನು ಪಡೆದುಕೊಂಡು ಗಾಧಿರಾಜನಿಗೆ ತಂದುಕೊಟ್ಟ. ಸತ್ಯವತಿಯು ಕೂಡಾ ಋಚೀಕನ ತೇಜಸ್ಸಿಗೆ ಮಾರು ಹೋಗಿದ್ದಳು. ಗಾಧಿರಾಜನು ಸಂತೋಷದಿಂದಲೇ ತನ್ನ ಮಗಳು ಸತ್ಯವತಿಯನ್ನು ಋಚೀಕನಿಗೆ ಧಾರೆ ಎರೆದು ಮಾಡುವೆ ಮಾಡಿ ಕೊಟ್ಟ.

ಗಾಧಿರಾಜನಿಗೆ ಗಂಡು ಸಂತಾನವಿರಲಿಲ್ಲ. ಒಂದು ದಿನ  ಈ ವಿಷಯವನ್ನು ಅಳಿಯನ ಮುಂದೆ ಪ್ರಸ್ತಾಪಿಸಿದ ಗಾಧಿರಾಜನು  ರಾಜ್ಯದ ಉತ್ತರಾಧಿಕಾರಿಯಾಗಬಲ್ಲ ಕ್ಷಾತ್ರಬಲವುಳ್ಳ ಶೂರ ಪುತ್ರನೊಬ್ಬ ಜನಿಸುವಂತೆ ಅನುಗ್ರಹ ಮಾಡಬೇಕೆಂದು ಕೇಳಿಕೊಂಡ. ಪ್ರಾರ್ಥನೆಯನ್ನು ಮನ್ನಿಸಿದ ಋಚೀಕನು ಮಂತ್ರಶಕ್ತಿಯಿಂದ ಎರಡು ಚರುಗಳನ್ನು ತಯಾರಿಸಿದ. ಒಂದು ಅತ್ತೆಗಾಗಿ ಹಾಗೂ ಇನ್ನೊಂದು ತನ್ನ ಹೆಂಡತಿಗಾಗಿ ಎಂದು ಬೇರೆ ಬೇರೆಯಾಗಿ ಇಟ್ಟು ಧ್ಯಾನಕ್ಕೆ ಕುಳಿತುಕೊಂಡ.

ಹೆಂಗಸರದು ಬಹಳ ಸಂಶಯ ಸ್ವಭಾವ. ತನ್ನ ಪತ್ನಿಯ ಸಲುವಾಗಿ ಶ್ರೇಷ್ಠ ಚರುವನ್ನು ಅಳಿಯನು ತಯಾರಿಸಿರಬೇಕೆಂಬ ಸಂಶಯವು ಸತ್ಯವತಿಯ ತಾಯಿಯನ್ನು ಕಾಡತೊಡಗಿತು. ತನ್ನ ಮಗಳು ಸತ್ಯವತಿಯನ್ನು ಕಾಡಿ ಬೇಡಿ ಅವಳ ಸಲುವಾಗಿ ಅಭಿಮಂತ್ರಿಸಿದ ಚರುವನ್ನು ತಿಂದುಬಿಟ್ಟಳು. ಮುಗ್ಧ ಸ್ವಭಾವದ ಸತ್ಯವತಿಯು ತನ್ನ ತಾಯಿಗಾಗಿ ತಯಾರಿಸಿದ ಚರುವನ್ನು ಅನಿವಾರ್ಯವಾಗಿ ತಿನ್ನಬೇಕಾಯಿತು. ನಂತರ ಈ ವಿಷಯವು ಋಚೀಕನಿಗೆ ತನ್ನ ಪತ್ನಿಯ ಮುಖೇನ ತಿಳಿದಾಗ ಅವನು ಬಹಳ ನೊಂದುಕೊಂಡನು. 


"ನೀನು ಬಹಳ ಅನರ್ಥ ಮಾಡಿಕೊಂಡೆ, ಚರುವಿನ ವಿನಿಮಯದಿಂದಾಗಿ ನಿನ್ನ ಹೊಟ್ಟೆಯಲ್ಲಿ ದಂಡಧರನಾದ ಕ್ಷಾತ್ರ ತೇಜಸ್ಸು ಹೊಂದಿರುವ ಮಗನು ಹುಟ್ಟುವನು. ಮತ್ತು ನಿನ್ನ ತಮ್ಮನು ಶ್ರೇಷ್ಥ ಬ್ರಹ್ಮರ್ಷಿಯಾಗುವನು". ಎಂದು ಹೇಳಲಾಗಿ ಸತ್ಯವತಿಯು ಬಹಳ ಗಾಬರಿಯಾಗಿ "ಹೀಗಾಗಕೂಡದು" ಎಂದು ಗಂಡನಲ್ಲಿ ಬಹಳವಾಗಿ ಪ್ರಾರ್ಥಿಸಿ ರೋದಿಸತೊಡಗಿದಳು. ಮಹಾ  ಕರುಣಾಶಾಲಿಯಾದ  ಋಚೀಕನು ಸತ್ಯವತಿಯನ್ನು ಸಂತೈಸಿ "ಒಳ್ಳೆಯದು ನಿನ್ನ ಮಗನ ಬದಲಾಗಿ ನಿನ್ನ ಮೊಮ್ಮಗನು ಘೋರ ಪ್ರಕೃತಿಯ ತೇಜಸ್ವಿ ಪುರುಷನಾಗುವನು" ಎಂದು ಆಶ್ವಾಸನೆಯನ್ನು ನೀಡಿದನು. ಮಹರ್ಷಿಯ ಮಾತು ಸುಳ್ಳಾಗಲಿಲ್ಲ 

ಭಗವಾನ್ ಪರಶುರಾಮ 
ನಂತರ ಸಕಾಲದಲ್ಲಿ ಗಾಧಿಮಹಾರಾಜನಿಗೆ ವಿಶ್ವಾಮಿತ್ರನೆಂಬ ಪರಮ ತೇಜಸ್ವಿಯು ಮಗನಾಗಿ ಜನಿಸಿದನು. ಸತ್ಯವತಿಯು ಜಮದಗ್ನಿ ಎಂಬ ಮಗನನು ಹಡೆದಳು. ಜಮದಗ್ನಿಯು ಬ್ರಹ್ಮರ್ಷಿಯಾಗಿ ರೇಣು ಎಂಬ ಋಷಿಯ ಪುತ್ರಿ ರೇಣುಕೆಯನ್ನು ಮದುವೆ ಮಾಡಿಕೊಂಡು ಪರಶುರಾಮನೆಂಬ ಕ್ಷಾತ್ರ ತೇಜಸ್ಸುಳ್ಳ ಮಗನನ್ನು ಪಡೆದನು. ಪರಶುರಾಮನು ವಿಷ್ಣುವಿನ ಆರನೆಯ ಅವತಾರ. ಋಚೀಕನಿಗೆ ಆದ ಸ್ವಪ್ನವೂ ಸತ್ಯವಾಯಿತು.

ಹೀಗೆ ಪರಶುರಾಮದೇವರ ಅವತಾರವಾಗಿ ದುಷ್ಟ ಸಂಹಾರಕ್ಕೆ ಕಾರಣವಾಯಿತು. ಮತ್ತು ಕ್ಷತ್ರಿಯ ಹುಟ್ಟು ಪಡೆದರೂ ಮುಂದೆ ಮಹಾಬ್ರಾಹ್ಮಣನೆಂದೆನಿಸಿ ವಿಶ್ವಾಮಿತ್ರನು ಮಹಾಮಂತ್ರವಾದ ಗಾಯತ್ರಿ ಮಂತ್ರ ದೃಷ್ಟ್ಹಾರರಾಗಿ ಲೋಕ ಕಲ್ಯಾಣಕ್ಕೆ ಕಾರಣರಾದರು.    
          

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ